ದಾವಣಗೆರೆ, ಸೆ.20 (DaijiworldNews/AA): ಕೇಂದ್ರ ಸರ್ಕಾರದ ಮಾನದಂಡಗಳಿಗೆ ಒಳಪಡುವ ತಾಲೂಕುಗಳನ್ನು ಗುರುತಿಸಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬರಪೀಡಿತ ಪ್ರದೇಶ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 10 ಪ್ರಮುಖ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಉಪಗ್ರಹ ಚಿತ್ರಗಳು ಮತ್ತು ಅದರಿಂದ ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗುತ್ತದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ತದನಂತರ 24 ತಾಲೂಕುಗಳನ್ನು ಸೇರಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 52 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ. ಲಭ್ಯವಿರುವ ಮಾಹಿತಿ ಪ್ರಕಾರ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಅಂತಿಮವಾಗಿ ಬರಪೀಡಿತ ಎಂದು ಘೋಷಣೆಯಾಗುವ ನಿರೀಕ್ಷೆಯಿದೆ" ಎಂದು ಮಾಹಿತಿ ನೀಡಿದರು.
"ರಾಜ್ಯದ 101 ತಾಲೂಕುಗಳಲ್ಲಿ ಬರದಿಂದಾಗಿ ಸುಮಾರು 18,000 ಕೋಟಿ ರೂ. ನಷ್ಟ ಸಂಭವಿಸಿದೆ. ಮೊದಲ ಹಂತದಲ್ಲಿ 3,500 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ" ಎಂದರು.