ಹಾಸನ, ಸೆ.20 (DaijiworldNews/AA): ಸ್ವಾತಂತ್ರ್ಯದ ಬಳಿಕ ನೂರೇ ದಿನದಲ್ಲಿ ಹೊಸ ಭರವಸೆ ಮೂಡಿಸಿದ ಸಿಎಂ ಅಂದ್ರೆ ಅದು ಡಿ.ಕೆ ಶಿವಕುಮಾರ್. ಅವರಿಗೆ 18 ತಿಂಗಳು ಸಾಕಾಗುವುದಿಲ್ಲ, ನೂರು ತಿಂಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಹೆಚ್.ಎಂ.ವಿಶ್ವನಾಥ್ ಅವರು ಡಿಕೆಶಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಕಲೇಶಪುರದ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, "ನನ್ನ ಪಕ್ಷ ಬೇರೆ, ಮುಂದೆಯೂ ಇವರ ನಾಯಕತ್ವ ಇದ್ದರೆ ನಾನು ಸ್ವಾಗತ ಮಾಡ್ತಿನಿ. ನಿಮಗೆ ಹದಿನೆಂಟು ತಿಂಗಳು ಸಾಲಲ್ಲ, ನೂರು ತಿಂಗಳು ಇರಬೇಕು" ಎಂದು ತಿಳಿಸಿದರು.
"ನಾವು ಮಲೆನಾಡಿಗರು ಒಂದು ರೀತಿ ಅನಾಥರು, ಕೇಳುವವರು ಯಾರು ಇಲ್ಲ. ಎಲ್ಲಾ ನಂಬಿಸಿ ಮೋಸ ಮಾಡಿದ್ದಾರೆ. ನಿಮ್ಮ ಮನೆಗೆ ನಮ್ಮ ಮಲೆನಾಡಿನ ಹೆಣ್ಣು ಮಗಳನ್ನು ಕೊಟ್ಟಿದ್ದೇವೆ. ಸಿದ್ಧಾರ್ಥ ಹೆಗ್ಗಡೆ ಅವರ ಕುಟುಂಬ ಬಿದ್ದಾಗ ನಿಮ್ಮ ಮನೆಯ ಮಗಳನ್ನು ಆ ಮನೆಗೆ ಕೊಟ್ಟು ಆ ಕುಟುಂಬವನ್ನು ಎತ್ತಿ ನಿಲ್ಲಿಸಿದವರು ನೀವು. ಈ ಭಾಗದಲ್ಲಿ ಸಂಬಂಧ, ಸ್ನೇಹ ನಿಮಗೆ ಇದೆ" ಎಂದು ಹೇಳಿದರು.
"ಕಸ್ತೂರಿ ರಂಗನ್ ವರದಿಯನ್ನು ಸಾರಾ ಸಗಟಾಗಿ ತಿರಸ್ಕಾರ ಮಾಡಿ. ಕಸ್ತೂರಿ ರಂಗನ್ ಬೇಡ ಅನ್ನಲ್ಲ ಹೊಸದಾಗಿ ಸರ್ವೆ ಮಾಡಿಸೋಣ ಅದರಲ್ಲಿ ಏನು ಬರುತ್ತೆ ನೋಡೋಣ. ಅಲ್ಲಿಯವರೆಗೆ ವರದಿಯನ್ನು ತಡೆ ಹಿಡಿಯಿರಿ" ಎಂದರು.