ನವದೆಹಲಿ, ಸೆ.21 (DaijiworldNews/AA): ಅಸ್ಸಾಂನ ಐರನ್ ಲೇಡಿ ಎಂದೇ ಜನಪ್ರಿಯರಾಗಿರುವ ಐಪಿಎಸ್ ಅಧಿಕಾರಿ ಸಂಯುಕ್ತಾ ಪರಾಶರ್ ಅವರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ವಿಶೇಷ ಅರಣ್ಯ ಯುದ್ಧ ಕಮಾಂಡೋ ಘಟಕವಾದ ಕೋಬ್ರಾದ ನೇತೃತ್ವ ವಹಿಸಿದ ಮೊದಲ ಮಹಿಳಾ ಇನ್ಸ್ಪೆಕ್ಟರ್ ಜನರಲ್ (ಐಜಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಆರ್ಪಿಎಫ್ ಕೇಂದ್ರ ಕಚೇರಿ ಸೆಪ್ಟೆಂಬರ್ 10 ರಂದು ಸಂಯುಕ್ತಾ ಪರಾಶರ್ ಅವರ ನೇಮಕಾತಿ ಆದೇಶ ಹೊರಡಿಸಿದ್ದು, ಬಳಿಕ ಅವರು 10 ಬೆಟಾಲಿಯನ್ಗಳನ್ನು ಒಳಗೊಂಡ ಕೋಬ್ರಾ ಪಡೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ದಾನೇಶ್ ರಾಣಾ ಅವರ ಹುದ್ದೆಗೆ ಸಂಯುಕ್ತಾ ಅವರು ನೇಮಕಗೊಂಡಿದ್ದಾರೆ.
ಕೋಬ್ರಾ ಪಡೆಯು ಅರಣ್ಯ ಮತ್ತು ಗೆರಿಲ್ಲಾ ಯುದ್ಧತಂತ್ರ, ಕಾಡು ಪ್ರದೇಶಗಳಲ್ಲಿ ದೀರ್ಘಾವಧಿಯ ಕಾರ್ಯಾಚರಣೆ, ಹೊಂಚು ದಾಳಿ ಮತ್ತು ಪ್ರತಿದಾಳಿ ತಂತ್ರಗಳು ಹಾಗೂ ಸಶಸ್ತ್ರ ಬಂಡುಕೋರರ ವಿರುದ್ಧ ಗುರಿನಿರ್ದಿಷ್ಟ ಕಾರ್ಯಾಚರಣೆಗಳಲ್ಲಿ ವಿಶೇಷ ತರಬೇತಿ ಪಡೆದಿರುವ ಸಿಆರ್ಪಿಎಫ್ನ ಘಟಕವಾಗಿದೆ. ಛತ್ತೀಸ್ಗಢ ಮತ್ತು ಜಾರ್ಖಂಡ್ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಈ ಪಡೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಿರಂತರ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಮಣಿಪುರದಲ್ಲೂ ಕೋಬ್ರಾದ ಎರಡು ಬೆಟಾಲಿಯನ್ಗಳನ್ನು ನಿಯೋಜಿಸಲಾಗಿದೆ.
ಸಂಯುಕ್ತಾ ಪರಾಶರ್ ಅವರು 2006ನೇ ಬ್ಯಾಚ್ನ ಅಸ್ಸಾಂ-ಮೇಘಾಲಯ ಕೇಡರ್ನ ಐಪಿಎಸ್ ಅಧಿಕಾರಿ. ವೃತ್ತಿಜೀವನದಲ್ಲಿ ಹಲವು ಸವಾಲಿನ ಕ್ಷೇತ್ರ ಮಟ್ಟದ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ಬಂಡುಕೋರ ವಿರೋಧಿ ಕಾರ್ಯಾಚರಣೆಗಳಲ್ಲಿನ ಸೇವೆಯಿಂದ ಗಮನ ಸೆಳೆದಿದ್ದಾರೆ.
2013ರಿಂದ 2014ರವರೆಗೆ ಸೋನಿತ್ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಸಂಯುಕ್ತಾ ಅವರಿಗೆ 'ಅಸ್ಸಾಂನ ಐರನ್ ಲೇಡಿ' ಎಂಬ ಹೆಸರು ಜನಪ್ರಿಯವಾಯಿತು. ಈ ಅವಧಿಯಲ್ಲಿ ಅವರು ಬೋಡೋಲ್ಯಾಂಡ್ನ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ವಿರುದ್ಧದ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು. 15 ತಿಂಗಳ ಅವಧಿಯಲ್ಲಿ 16 ಉಗ್ರರನ್ನು ಹತ್ಯೆಗೈದಿದ್ದು, 60ಕ್ಕೂ ಹೆಚ್ಚು ಬಂಡುಕೋರರನ್ನು ಬಂಧಿಸಲಾಗಿತ್ತು ಎಂದು ವರದಿಯಾಗಿದೆ.
ಸಂಯುಕ್ತಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸೇರ್ಪಡೆಗೊಂಡು ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಂತರ ಉಪ ಮಹಾನಿರ್ದೇಶಕರಾಗಿ (ಡಿಐಜಿ) ಬಡ್ತಿ ಪಡೆದರು. 2017ರಿಂದ 2023ರವರೆಗೆ ಎನ್ಐಎಯಲ್ಲಿದ್ದ ಅವಧಿಯಲ್ಲಿ ಭಯೋತ್ಪಾದನೆ ವಿರೋಧಿ ಹಲವು ಪ್ರಕರಣಗಳಲ್ಲಿ ಅವರು ಕೆಲಸ ಮಾಡಿದ್ದರು.
ಸಿಆರ್ಪಿಎಫ್ಗೆ ನೇಮಕಗೊಳ್ಳುವ ಮೊದಲು ಸಂಯುಕ್ತಾ ಪರಾಶರ್ ಅವರು ಅಸ್ಸಾಂ ಪೊಲೀಸರ ಅಪರಾಧ ತನಿಖಾ ವಿಭಾಗದ (ಸಿಐಡಿ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಕೋಬ್ರಾ ಪಡೆಯ ನೇತೃತ್ವವನ್ನು ಸಂಯುಕ್ತ ಅವರು ವಹಿಸಿಕೊಳ್ಳುವ ಮೂಲಕ ಈ ವಿಶೇಷ ಪಡೆ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿಗೆ ಈ ಪಡೆಯ ನೇತೃತ್ವವನ್ನು ಮಹಿಳಾ ಅಧಿಕಾರಿ ವಹಿಸಿಕೊಂಡಂತಾಗಿದೆ.
ಸಂಯುಕ್ತಾ ಅವರು ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜ್ ಫಾರ್ ವುಮೆನ್ನಲ್ಲಿ ರಾಜಕೀಯ ವಿಜ್ಞಾನ ಅಧ್ಯಯನ ಮಾಡಿದರು. ಬಳಿಕ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಕುರಿತು ಉನ್ನತ ಶಿಕ್ಷಣ ಪಡೆದರು. ಅವರ ಪ್ರಾಥಮಿಕ ಶಿಕ್ಷಣ ಅಸ್ಸಾಂನಲ್ಲಿ ಪಡೆದರು.