ಬೆಂಗಳೂರು, ಸೆ.21 (DaijiworldNews/AA): ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿಯ ಕುರಿತು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.

ಕಳೆದ ತಿಂಗಳು ನಡೆದ ಅಧಿವೇಶನದಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಪ್ರತಿದಿನ ಧರಣಿ, ಪ್ರತಿಭಟನೆ ನಡೆಸಿತ್ತು. ಹೀಗಾಗಿ ಬರ ಸೇರಿದಂತೆ ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೆ ಮೂರು ದಿನ ಮೊದಲೇ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. ಆದ್ದರಿಂದ ಇದೀಗ ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುತ್ತದೆ.
ಮೂರು ದಿನಗಳು ನಡೆಯುವ ಈ ವಿಶೇಷ ಅಧಿವೇಶನ ಬೆಳಗ್ಗೆ 11 ಗಂಟೆಗೆ ಸದನ ಆರಂಭವಾಗಲಿದೆ. ಈ ವಿಶೇಷ ಅಧಿವೇಶನದಲ್ಲಿ ರಾಜ್ಯದಲ್ಲಿ ಎದುರಾಗಿರುವ ಭೀಕರ ಬರ ಪರಿಸ್ಥಿತಿ, ಬೆಳೆಹಾನಿ, ಕುಡಿಯುವ ನೀರು ಮತ್ತು ವಿದ್ಯುತ್ ಅಭಾವ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ, ಬೆಳೆ ನಷ್ಟ ಪರಿಹಾರ, ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ. ಇನ್ನು ಇದರೊಂದಿಗೆ ರೈತರ ಸಾಲಮನ್ನಾಗೆ ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆಯಿದೆ.