ನವದೆಹಲಿ, ಸೆ.21 (DaijiworldNews/AA): ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಅಧಿಕೃತ ಹೆಸರು ಮತ್ತು ಚುನಾವಣಾ ಚಿಹ್ನೆ ಬಳಕೆಗೆ ತಡೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ಪೀಠದ ಮುಂದೆ ಟಿಎಂಸಿ ಪರ ವಕೀಲರು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದರು. ಚುನಾವಣಾ ಆಯೋಗವು ನೋಟಿಸ್ ನೀಡಿರುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪಕ್ಷದ ಚುನಾವಣಾ ಚಿಹ್ನೆಗೆ ತಡೆ ನೀಡಿರುವುದನ್ನು ಪ್ರಶ್ನೆ ಮಾಡಿದರು.
ಪಕ್ಷದ ಹೆಸರು, ಚಿಹ್ನೆ ಹಾಗೂ ಸಂಘಟನಾ ನಿಯಂತ್ರಣದ ಮೇಲೆ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣ ಹಕ್ಕು ಮಂಡಿಸಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಟಿಎಂಸಿ ಪಕ್ಷದ ಹೆಸರು ಮತ್ತು ಪಕ್ಷದ ಸಾಂಪ್ರದಾಯಿಕ 'ಹೂವು ಮತ್ತು ಹುಲ್ಲು' ಚಿಹ್ನೆಯನ್ನು ಬಳಸುವುದನ್ನು ಎರಡೂ ಬಣಗಳಿಗೆ ನಿರ್ಬಂಧಿಸಿ ಚುನಾವಣಾ ಆಯೋಗ ಸೆಪ್ಟೆಂಬರ್ 18ರಂದು ಮಹತ್ವದ ಆದೇಶ ಹೊರಡಿಸಿತ್ತು.
ಮುಂಬರುವ ಉಪಚುನಾವಣೆಗಳಿಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ 'ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' ಹೆಸರು ಹಾಗೂ 'ಫುಟ್ಬಾಲ್ ಆಟಗಾರ' ಚಿಹ್ನೆ ನೀಡಲಾಗಿದ್ದರೆ, ಋತಬ್ರತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ಬೆಂಬಲಿತ ಬಂಡಾಯ ಬಣಕ್ಕೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಹೆಸರು ಹಾಗೂ 'ಲಕೋಟೆ' ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.