ಬೆಂಗಳೂರು, ಸೆ.22 (DaijiworldNews/AK): ನಗರದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ಪ್ರತ್ಯೇಕ ಪ್ರಕರಣಗಳಲ್ಲಿ 6 ಪ್ರಯಾಣಿಕರನ್ನು ಬಂಧಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ವಿಯೆಟ್ನಾಂ ಹಾಗೂ ಬ್ಯಾಂಕಾಕ್ನಿಂದ ಲಗೇಜ್ ಬ್ಯಾಗ್ಗಳಲ್ಲಿ ಅಡಗಿಸಿ ತರಲಾಗಿದ್ದ ಒಟ್ಟು 80.11 ಕೆಜಿ ತೂಕದ ಅತ್ಯಂತ ದುಬಾರಿ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ತಂಡ ಪತ್ತೆಹಚ್ಚಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 28 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಾಕ್ನಿಂದ ಬಂದಿದ್ದ ಪ್ರಯಾಣಿಕರು ಸೇರಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಐದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಸ್ಟಮ್ಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಅಬುದಾಬಿ ಹಾಗೂ ಕೌಲಾಲಂಪುರದಿಂದ ಕೆಐಎಗೆ ಆಗಮಿಸಿದ್ದ ಪ್ರಯಾಣಿಕರಿಂದ 1.75 ಕೋಟಿ ರೂಪಾಯಿ ಮೌಲ್ಯದ 1.2 ಕೆಜಿ ಅಕ್ರಮ ಚಿನ್ನಾಭರಣಗಳನ್ನು ಸೀಜ್ ಮಾಡಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರನ್ನು ಬಂಧಿಸಿ ಕಸ್ಟಮ್ಸ್ ತನಿಖೆ ಮುಂದುವರಿಸಿದೆ.