ಬೆಂಗಳೂರು, ಸೆ.22 (DaijiworldNews/AK): ವಿಶೇಷ ಅಧಿವೇಶನದ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರ ಮುಖ್ಯಮಂತ್ರಿಯವರದು ಎಂಬ ಭಾವನೆ ಇವತ್ತು ಎಲ್ಲರಲ್ಲೂ ಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬರಗಾಲ ಮತ್ತು ಕಸ್ತೂರಿರಂಗನ್ ವರದಿ ಎರಡಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂಬ ದೃಷ್ಟಿಯಿಂದ ಮುತುವರ್ಜಿ ವಹಿಸಿ ಈ ವಿಶೇಷ ಅಧಿವೇಶನ ಕರೆದಿದ್ದು, ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳೇ ಸದನದಲ್ಲೂ ಹಾಗೂ ಸದನದ ಹೊರಗಡೆನೂ ಹೇಳಿದ್ದಾರೆ. ಆದರೆ ಮತ್ತೊಂದು ಕಡೆ ಕಸ್ತೂರಿರಂಗನ್ ವಿಚಾರದಲ್ಲಿ ಮುಖ್ಯಮಂತ್ರಿಗಳೇ ಹೇಳಿದ್ದರಿಂದ ನಾವು ಹೋರಾಟ ಮಾಡಿದ್ದೇವೆ; ಶಿವಮೊಗ್ಗ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದ್ದೇವೆ ಅಂತ ಆಡಳಿತ ಪಕ್ಷದ ಶಾಸಕರು ಹೇಳುತ್ತಿದ್ದಾರೆ ಎಂದು ಗಮನ ಸೆಳೆದರು. ರಾಜಕಾರಣ ಮಾಡುವುದಿಲ್ಲ ಎನ್ನುವ ಹಾಗೂ ಪರಿಹಾರ ಕೊಡ್ತೀನಿ ಎಂದು ತಿಳಿಸಿದ ಮುಖ್ಯಮಂತ್ರಿಗಳು ಕುತಂತ್ರ ಮಾಡುತ್ತಿರುವಂತಿದೆ ಎಂದು ಟೀಕಿಸಿದರು.
ಪಾದಯಾತ್ರೆಯಿಂದ ವಿಚಲಿತರಾದ ಸಿಎಂ
ಭಾರತೀಯ ಜನತಾ ಪಾರ್ಟಿ ನಾವು ಪಾದಯಾತ್ರೆ ನಡೆಸದೇ ಇದ್ದಲ್ಲಿ ಈ ಪುಣ್ಯಾತ್ಮ ವಿಶೇಷ ಅಧಿವೇಶನ ಕರೆಯುತ್ತಿರಲಿಲ್ಲ ಎಂದು ಆರೋಪಿಸಿದರು. ಬದಲಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನಲ್ಲಿ ಮೀನು ಹಿಡ್ಕೊಂಡು ಅಲ್ಲೇ ಕೂರುತ್ತಿದ್ದರು ಎಂದು ದೂರಿದರು.
ನಮ್ಮ ಪಾದಯಾತ್ರೆಯಿಂದ ಪಾದಯಾತ್ರೆಯಿಂದ ವಿಚಲಿತರಾಗಿದ್ದಂತಹ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿದ್ದಾರೆ. ಮತ್ತೊಂದು ಕಡೆ ಮಾಜಿ ಸಚಿವ ಮತ್ತು ಹಿರಿಯ ಶಾಸಕ ಎಚ್.ಕೆ. ಪಾಟೀಲ್ ರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ತಾಲೂಕನ್ನ ಬರಪೀಡಿತ ಎಂದು ಘೋಷಿಸದೇ ಇದ್ದರೆ ರಾಜೀನಾಮೆ ಬಿಸಾಕುವೆ ಅಂತ ಹೇಳಿದ್ದಾರೆ. ಮುದ್ದೇಬಿಹಾಳದ ಶಾಸಕರು ಅಪ್ಪಾಜಿ ಗೌಡರು ಬರಪೀಡಿತ ತಾಲೂಕು ಘೋಷಣೆ ಮಾಡುವುದರ ಬಗ್ಗೆ ಕೀಳು ರಾಜಕಾರಣ ಮಾಡ್ತಾ ಇದ್ದಾರೆ ಅಂತ ಹೇಳಿ ನೇರವಾಗಿ ಆರೋಪ ಮಾಡಿದ್ದಾರೆ ಮತ್ತೊಂದು ಕಡೆ ಜೆಡಿಎಸ್ ನ ಶಾಸಕರು ಇಲ್ಲೇ ಧರಣಿ ಕೂತಿದ್ದರು ಎಂದು ವಿವರಿಸಿದರು.
ನಾಟಕ ಆಡುವುದನ್ನು ಬಿಟ್ಟು ಜನರಿಗೆ ನ್ಯಾಯ ಕೊಡಲಿ
ಬಿಜೆಪಿಯ ಬೆಂಗಳೂರು ಶಾಸಕರನ್ನ ಬಿಟ್ಟು ಉಳಿದ 44 ಕ್ಷೇತ್ರಗಳಲ್ಲಿ ಕೇವಲ 20 ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕು ಅಂತ ಘೋಷಿಸಿದ್ದಾರೆ. ಇದು ರಾಜಕಾರಣ ಅಲ್ಲವೇ ಮುಖ್ಯಮಂತ್ರಿಗಳೇ ಎಂದು ಕೇಳಿದರು. ನಾವು ಸದನದಲ್ಲೂ ಕೂಡ ಮಾತನಾಡುತ್ತೇವೆ. ಮಾನ್ಯ ಮುಖ್ಯಮಂತ್ರಿಗಳು ಬರಗಾಲ ಮತ್ತು ಕಸ್ತೂರಿರಂಗನ್ ವಿಚಾರದಲ್ಲಿ ಕಪಟ ನಾಟಕ ಆಡುವುದನ್ನು ಬಿಟ್ಟು ಜನರಿಗೆ ನ್ಯಾಯ ಕೊಡಲಿ ಎಂದು ಆಗ್ರಹಿಸಿದರು.