ಪುಣೆ, ಸೆ.23 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 26 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಶಿವಂಶ್ ಸುಭಾಷ್ ಜಗದೆ ಅವರ ಯಶೋಗಾಥೆ ಇದು.

ಶಿವಂಶ್ ಜಗದೆ ಅವರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ರೂಲೆ ಎಂಬ ಪುಟ್ಟ ಗ್ರಾಮದವರು. ಇಂಜಿನಿಯರಿಂಗ್ ಪದವೀಧರರಾಗಿರುವ ಅವರು ಬಳಿಕ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಾರೆ.
2024ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಶಿವಂಶ್ ಜಗದೆ ಅವರು 26ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ವಿಶೇಷವೆಂದರೆ, ಯಾವುದೇ ಕೋಚಿಂಗ್ ಪಡೆಯದೆ ತಮ್ಮ ಮೊದಲ ಪ್ರಯತ್ನದಲ್ಲೇ ಶಿವಂಶ್ ಈ ಸಾಧನೆ ಮಾಡಿದ್ದಾರೆ.
ಶಿಸ್ತು ಮತ್ತು ಸ್ಪಷ್ಟ ಗುರಿಯನ್ನು ಹೊಂದಿದ್ದ ಶಿವಂಶ್, ಪರೀಕ್ಷೆಯ ತಯಾರಿಗಾಗಿ ಸಂಪೂರ್ಣವಾಗಿ ಸ್ವಯಂ ಅಧ್ಯಯನ ಮತ್ತು ಆನ್ಲೈನ್ ಸಂಪನ್ಮೂಲಗಳನ್ನು ಅವಲಂಬಿಸಿದ್ದರು. ಇವರ ಏಕಾಗ್ರತೆ, ಪರಿಶ್ರಮ ಮತ್ತು ಸ್ವಯಂ ಪ್ರೇರಣೆಯ ಶಕ್ತಿಯ ಫಲವಾಗಿ ಕೇವಲ 22 ವರ್ಷದವರಿರುವಾಗಲೇ ಈ ಸಾಧನೆ ಮಾಡಲು ಸಾಧ್ಯವಾಯಿತು.
ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಶಿವಂಶ್, "ಸಮಾಜಕ್ಕೆ ಸೇವೆ ಸಲ್ಲಿಸುವುದು ನನ್ನ ಬಹುದಿನದ ಕನಸಾಗಿತ್ತು. ಆ ಗುರಿಯನ್ನು ತಲುಪಲು ಯುಪಿಎಸ್ಸಿ ಅತ್ಯುತ್ತಮ ವೇದಿಕೆ ಎಂದು ನಾನು ನಂಬಿದ್ದೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವೇ ನನ್ನ ಈ ಯಶಸ್ಸಿನ ಹಿಂದಿನ ರಹಸ್ಯ" ಎಂದು ತಿಳಿಸಿದ್ದಾರೆ.