ಹೈದರಾಬಾದ್, ಸೆ.24 (DaijiworldNews/TA): ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ನಡೆದ ಗಣೇಶ ಲಡ್ಡು ಹರಾಜು ಮತ್ತೊಮ್ಮೆ ಗಮನ ಸೆಳೆದಿದೆ. ಹೈದರಾಬಾದ್ನ ಬಂಡ್ಲಗುಡ ಜಾಗೀರ್ನಲ್ಲಿರುವ ಪ್ರಸಿದ್ಧ ಕೀರ್ತಿ ರಿಚ್ಮಂಡ್ ವಿಲ್ಲಾಸ್ನಲ್ಲಿ ನಡೆದ ಹರಾಜಿನಲ್ಲಿ ಪ್ರಸಾದದ ಲಡ್ಡು ಬರೋಬ್ಬರಿ ರೂ. 1.01 ಕೋಟಿಗೆ ಹರಾಜಾಗಿದೆ.

ಗಣೇಶ ವಿಸರ್ಜನೆಗೂ ಮುನ್ನ ನಡೆದ ಹರಾಜಿನಲ್ಲಿ ವಿಲ್ಲಾ ನಿವಾಸಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಲಡ್ಡು ಪಡೆಯಲು ಹಲವು ಗುಂಪುಗಳು ಬಿಡ್ಡಿಂಗ್ನಲ್ಲಿ ಭಾಗವಹಿಸಿದ್ದು, ಕ್ಷಣಕ್ಷಣಕ್ಕೂ ಹರಾಜು ಮೊತ್ತ ಏರಿಕೆಯಾಗುತ್ತಿತ್ತು. ಅಂತಿಮವಾಗಿ ‘ಶಕ್ತಿಮಾನ್’ ತಂಡ ರೂ. 1.01 ಕೋಟಿ ಬಿಡ್ ಮಾಡಿ ಲಡ್ಡುವನ್ನು ತನ್ನದಾಗಿಸಿಕೊಂಡಿದೆ. ಆದರೆ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹರಾಜಿನ ಮೊತ್ತ ಕಡಿಮೆಯಾಗಿದೆ. 2024ರಲ್ಲಿ ರೂ.1.87 ಕೋಟಿ ಹಾಗೂ 2025ರಲ್ಲಿ ರೂ. 2.31 ಕೋಟಿಗೆ ಇದೇ ಲಡ್ಡು ಹರಾಜಾಗಿತ್ತು. ಲಡ್ಡು ಹರಾಜಿನಿಂದ ಸಂಗ್ರಹವಾಗುವ ಹಣವನ್ನು ‘ಆರ್ಪಿ ದಿಯಾ ಚಾರಿಟೇಬಲ್ ಟ್ರಸ್ಟ್’ ಮೂಲಕ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತಿದೆ.
ವಿಲ್ಲಾಗಳಲ್ಲಿ ಕೆಲಸ ಮಾಡುವ ಚಾಲಕರು, ಮನೆ ಕೆಲಸದವರು ಹಾಗೂ ಸ್ಥಳೀಯ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ, ವಿಶೇಷವಾಗಿ ಶಾಲಾ ಶುಲ್ಕ ಪಾವತಿಸಲು ಈ ಹಣವನ್ನು ಬಳಸಲಾಗುತ್ತಿದೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಬಡವರಿಗೆ ಉಚಿತ ವೈದ್ಯಕೀಯ ನೆರವು ನೀಡುವುದರ ಜೊತೆಗೆ ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ವಿವಿಧ ದತ್ತಿ ಸಂಸ್ಥೆಗಳಿಗೂ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಕೀರ್ತಿ ರಿಚ್ಮಂಡ್ ವಿಲ್ಲಾಸ್ನಲ್ಲಿ ಈ ಲಡ್ಡು ಹರಾಜು 2018ರಲ್ಲಿ ಕೇವಲ ರೂ. 25 ಸಾವಿರದಿಂದ ಆರಂಭವಾಗಿತ್ತು. ವರ್ಷದಿಂದ ವರ್ಷಕ್ಕೆ ಹರಾಜಿನ ಮೊತ್ತ ಹೆಚ್ಚುತ್ತಾ ಬಂದು ಕೋಟಿ ರೂಪಾಯಿ ಮಟ್ಟ ತಲುಪಿದೆ. ಗಣೇಶ ಹಬ್ಬದ ಆಚರಣೆಯ ಜೊತೆಗೆ ಹರಾಜಿನಿಂದ ಸಂಗ್ರಹವಾಗುವ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಿರುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆಯಾಗಿದೆ.