ಚಿಕ್ಕಬಳ್ಳಾಪುರ, ಸೆ.24 (DaijiworldNews/AK): ಚುನಾವಣಾ ಆಯೋಗದ ಮೇಲೆ ಬಿಜೆಪಿ ನಿಯಂತ್ರಣವಿದ್ದು, ಚುನಾವಣಾ ಆಯೋಗವನ್ನು , ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ 19 ರಾಜ್ಯಗಳಲ್ಲಿ 13 ಕೋಟಿ ಮತದಾರರ ಹೆಸರು ತೆಗೆದುಹಾಕಲಾಗಿದೆ . ಕರ್ನಾಟಕದಲ್ಲೂ 1.48 ಕೋಟಿ ಡಿಲೀಟ್ ಮಾಡಲಾಗಿದೆ. ಹೀಗಾಗಿ ಇದು ಬ್ರಿಟನ್, ಜರ್ಮನಿ, ಜಪಾನ್ ಸೇರಿ ಹಲವು ದೇಶಗಳ ಮತದಾರರ ಸಂಖ್ಯೆಗೆ ಸಮೀಪವಾಗಿದೆ. ಹೀಗಾಗಿ ಎಸ್ಐಆರ್ ಪ್ರಕ್ರಿಯೆಯೇ ದೋಷಪೂರಿತವಾಗಿದ್ದು, ಎಸ್ಐಆರ್ ಪ್ರಕ್ರಿಯೆಯನ್ನ ಮರುಪರಿಶೀಲಿಸುವಂತೆ ಆಗ್ರಹಿಸಿದರು.
ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಒಬ್ಬರೇ ಚುನಾವಣಾ ಆಯೋಗದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಎಸ್ಐಆರ್ ವಿಚಾರದಲ್ಲಿ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿವೆ. ಇತರ ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್ ಅವರ ಕೆಲವು ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.