ಬೆಂಗಳೂರು, ಸೆ.24 (DaijiworldNews/AK): ರೈತರಿಗೆ ಪರಿಹಾರ ಕೊಡಲು ಆಗದಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ನೆರವಿಗೆ ಬರದಿದ್ರೆ ಸರ್ಕಾರ ಸತ್ತಂತೆ ಎಂದು ಆಕ್ಷೇಪಿಸಿದರು. ಬಿಡದಿ ಟೌನ್ ಶಿಪ್ ಮಾಡಲು, ಸುರಂಗ ರಸ್ತೆ ಮಾಡುವ ಆಸಕ್ತಿಯನ್ನೇ, ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡುವಲ್ಲಿ ತೋರುವ ಉತ್ಸಾಹವನ್ನೇ ಸಿಎಂ, ರೈತರ ಸಂಕಷ್ಟಕ್ಕೂ ಮಿಡಿಯುವಲ್ಲಿ ಸರ್ಕಾರ ತೋರಲಿ. ಅನ್ನದಾತರಿಗೆ ನೆರವು ನೀಡದಿದ್ದರೆ ಸರ್ಕಾರ ಬದುಕಿದ್ದೂ ಸತ್ತಂತೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರಕ್ಕೆ ಅನುದಾನಕ್ಕೆ ಕಾಯದೆ ಬಿ.ಎಸ್.ಯಡಿಯೂರಪ್ಪ ಅವರು ಪರಿಹಾರ ನೀಡಿದ್ದರು. ಹಣಕಾಸು ನಿರ್ವಹಣೆಯಲ್ಲಿ ವಿಫಲವಾದ ಸರ್ಕಾರ ರೈತರನ್ನು ಬಲಿಪಡೆಯದಿರಲಿ ಎಂದರು.
ಬಿಜೆಪಿಗೆ ಯೋಜನೆಯ ಯಶಸ್ಸು ಲಭಿಸಬೇಕು
ಭದ್ರಾ ಮೇಲ್ದಂಡೆ ಯೋಜನೆಯ ಯಶಸ್ಸು ಸಿಗಬೇಕಾಗಿರುವುದು ಬಿಜೆಪಿಗೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದ ಫಲವಾಗಿ ಈ ಯೋಜನೆಗೆ ಚಾಲನೆ ನೀಡಿ ಇಂದು ಸಾಕಾರವಾಗಿದೆ. ಆದರೆ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವೇ ಮಾಡಿದ್ದು ಎಂಬಂತೆ ಬಿಂಬಿಸಿ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಚಿತ್ರದುರ್ಗದ ಗೋನೂರು ಕೆರೆ ತುಂಬಿದ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ರೈತರಿಂದ ಸನ್ಮಾನ ಮಾಡಿಸಿಕೊಳ್ಳಲು ಸಿಎಂ ಆತುರರಿಂದ ಹೋಗಿದ್ದಾರೆ. ಅಲ್ಲಿನ ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತ ದೊಡ್ಡ ಕಾರ್ಯಕ್ರಮ ಮಾಡಲು ಮುಂದಾಗಿದ್ದರು. ಆದರೆ ನೀತಿ ಸಂಹಿತೆ ಇದೆ ಎಂದು ರೈತರಿಂದ ಸಿಎಂಗೆ ಸನ್ಮಾನ ಎಂದು ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ದೂರಿದರು.