ಹರಿಯಾಣ, ಸೆ.24 (DaijiworldNews/TA): ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್ಸ್ಟರ್ ಮೈನ್ಪಾಲ್ ಧಿಲ್ಲಾಗೆ ತನ್ನ ಕಾಂಬೋಡಿಯನ್ ಸಂಗಾತಿಯನ್ನು ವಿವಾಹವಾಗಲು ಹರಿಯಾಣ ಹೈಕೋರ್ಟ್ 12 ಗಂಟೆಗಳ ‘ಕಸ್ಟಡಿ ಪೆರೋಲ್’ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಜೈಲಿನಿಂದ ಹೊರಬಂದು ವಿವಾಹವಾಗಲಿರುವ ಪ್ರಕರಣ ಗಮನ ಸೆಳೆದಿದೆ.

ಝಜ್ಜರ್ನ ಬದ್ಲಿ ಗ್ರಾಮದ ನಿವಾಸಿಯಾಗಿರುವ ಮೈನ್ಪಾಲ್ ಧಿಲ್ಲಾಗೆ ಜೈಲಿನ ಸಮೀಪದ ಫಾರ್ಮ್ಹೌಸ್ನಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಸ್ಟಡಿ ಪೆರೋಲ್ ನೀಡಲಾಗಿದೆ. ವಿವಾಹದ ಧಾರ್ಮಿಕ ವಿಧಿವಿಧಾನಗಳು ಹಾಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆತನನ್ನು ಪೊಲೀಸ್ ಭದ್ರತೆಯಲ್ಲೇ ಮತ್ತೆ ಜೈಲಿಗೆ ಕರೆದೊಯ್ಯಲಾಗುತ್ತದೆ.
ಧಿಲ್ಲಾ ಮದುವೆಯಾಗಲಿರುವ ಮೆಟಾ ಚಾನ್ ಕಾಂಬೋಡಿಯಾ ನಿವಾಸಿಯಾಗಿದ್ದಾರೆ. ವಿವಾಹ ಕಾರ್ಯಕ್ರಮಕ್ಕಾಗಿ ಅವರು ತಮ್ಮ ಮೂವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಮತ್ತೊಂದು ಮಗು ಕಾಂಬೋಡಿಯಾದಲ್ಲೇ ಇರುವುದಾಗಿ ವರದಿಯಾಗಿದೆ. 2018ರಲ್ಲಿ ಪೆರೋಲ್ ಪಡೆದು ಭಾರತದಿಂದ ಕಾಂಬೋಡಿಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಧಿಲ್ಲಾಗೆ ಮೆಟಾ ಚಾನ್ ಪರಿಚಯವಾಗಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಕಾಂಬೋಡಿಯಾದಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ.
ಮೈನ್ಪಾಲ್ ಧಿಲ್ಲಾ ವಿರುದ್ಧ ಕೊಲೆ, ಕೊಲೆಯತ್ನ ಹಾಗೂ ಸುಲಿಗೆ ಸೇರಿದಂತೆ 22 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. 2007 ಮತ್ತು 2010ರ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದನು. ಜೈಲಿನಲ್ಲಿದ್ದಾಗಲೇ ಸಹ ಕೈದಿಯೊಬ್ಬನನ್ನು ಕೊಂದ ಆರೋಪವೂ ಧಿಲ್ಲಾ ವಿರುದ್ಧ ಇದೆ ಎಂದು ವರದಿಯಾಗಿದೆ.
2018ರ ಜುಲೈನಲ್ಲಿ ಆರು ವಾರಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ಧಿಲ್ಲಾ, ‘ಸೋನು ಕುಮಾರ್’ ಎಂಬ ಹೆಸರಿನ ನಕಲಿ ಗುರುತಿನ ಚೀಟಿ ಬಳಸಿ ಕಾಂಬೋಡಿಯಾಕ್ಕೆ ಪರಾರಿಯಾಗಿದ್ದ ಎಂದು ವರದಿಯಾಗಿದೆ. ಅಲ್ಲಿ ತನ್ನ ಗುರುತನ್ನು ಮರೆಮಾಚಿಕೊಂಡು ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಹರಿಯಾಣ ಪೊಲೀಸರ ಮನವಿಯ ಮೇರೆಗೆ ಸಿಬಿಐ 2024ರ ನವೆಂಬರ್ನಲ್ಲಿ ಆತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಬಳಿಕ 2025ರ ಜುಲೈನಲ್ಲಿ ಕಾಂಬೋಡಿಯನ್ ಪೊಲೀಸರು ಆತನನ್ನು ಬಂಧಿಸಿದ್ದು, ಸೆಪ್ಟೆಂಬರ್ 2025ರಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಧಿಲ್ಲಾ ಮತ್ತು ಮೆಟಾ ಚಾನ್ ಅಧಿಕೃತವಾಗಿ ವಿವಾಹವಾದರೆ, ಅವರ ನಾಲ್ವರು ಮಕ್ಕಳ ಪೌರತ್ವ, ಆಸ್ತಿ ಹಕ್ಕು ಹಾಗೂ ಪಾಸ್ಪೋರ್ಟ್ ಮತ್ತು ವೀಸಾ ಸಂಬಂಧಿತ ದಾಖಲೆಗಳ ವಿಚಾರದಲ್ಲಿ ಕಾನೂನುಬದ್ಧ ಮಾನ್ಯತೆ ಪಡೆಯಲು ನೆರವಾಗಲಿದೆ ಎಂದು ಧಿಲ್ಲಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಇದೀಗ ಪೊಲೀಸ್ ಭದ್ರತೆಯ ನಡುವೆ ನಡೆಯಲಿರುವ ಈ ವಿವಾಹದ ಬಗ್ಗೆ ಗಮನ ಹರಿದಿದ್ದು, ವಿವಾಹ ಪೂರ್ಣಗೊಂಡ ಬಳಿಕ ಧಿಲ್ಲಾ ಮತ್ತೆ ಜೈಲಿಗೆ ಮರಳಲಿದ್ದಾರೆ.