ನವದೆಹಲಿ, ಸೆ.24 (DaijiworldNews/AA): ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಎದುರಾಗಿದ್ದು, ಪ್ರತಿ ವರ್ಷ ನಡೆಯಬೇಕಿದ್ದ ಮತದಾರರ ಪಟ್ಟಿ ತಿದ್ದುಪಡಿ/ಪರಿಷ್ಕರಣೆ ಕೆಲಸ ತಡವಾಗಿದೆ. ಇದರಿಂದ ಹೊಸದಾಗಿ ಮತದಾನದ ಹಕ್ಕು ಪಡೆಯುತ್ತಿರುವ ಯುವಕರ ಹೆಸರು ಪಟ್ಟಿಗೆ ಸೇರುವುದು ತಡವಾಗಬಹುದು ಎಂಬ ಆತಂಕ ಶುರುವಾಗಿದೆ.

'ದಿ ಎಕನಾಮಿಕ್ ಟೈಮ್ಸ್' ವರದಿ ಪ್ರಕಾರ, 2024ರ ಲೋಕಸಭಾ ಚುನಾವಣೆ ಮುಗಿದ ಮೇಲೆ ಪ್ರತಿ ವರ್ಷ ನಡೆಯುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' (ಎಸ್ಎಸ್ಆರ್) ಕೆಲಸ ಇದುವರೆಗೆ ಪುನರಾರಂಭಗೊಂಡಿಲ್ಲ. ಇದರಿಂದ 18 ವರ್ಷ ತುಂಬಿ ಮತದಾನಕ್ಕೆ ಅರ್ಹತೆ ಪಡೆದ ಯುವಕ-ಯುವತಿಯರಿಗೆ ತೊಂದರೆಯಾಗಬಹುದು ಎಂದು ವರದಿ ಹೇಳಿದೆ.
ಈಗಷ್ಟೇ 18 ವರ್ಷ ತುಂಬಿ ಮೊದಲ ಬಾರಿಗೆ ವೋಟ್ ಮಾಡಲು ಕಾಯುತ್ತಿರುವ 'ಜೆನ್ ಝೀ' ಮತದಾರರ ಪಾಲಿಗೆ ಈ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ. ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು, ಹೆಸರು ತಿದ್ದುಪಡಿ ಮಾಡುವುದು, ವಿಳಾಸ ಬದಲಾಯಿಸುವುದು ಅಥವಾ ಪಟ್ಟಿಯಿಂದ ಹೆಸರು ತೆಗೆಯುವುದು - ಈ ಎಲ್ಲ ಕೆಲಸಗಳು ಈ ನಿಯಮಿತ ಪರಿಷ್ಕರಣೆಯಲ್ಲೇ ನಡೆಯುತ್ತವೆ.
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಈ ವಾರ್ಷಿಕ ತಿದ್ದುಪಡಿ ಕೆಲಸವನ್ನು ತಕ್ಷಣ ಶುರು ಮಾಡಬೇಕು ಎಂದು ಹೇಳಿದ್ದಾರೆ. ಆದರೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ಈಗಷ್ಟೇ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಜೊತೆಗೆ ಇದನ್ನು ಹೇಗೆ ನಡೆಸುವುದು ಎಂದು ಕಾನೂನು ಸಲಹೆ ಕೇಳಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಹೊಸದಾಗಿ ಮತದಾರರಾಗಲು ಅರ್ಜಿ ಸಲ್ಲಿಸುವ 'ಫಾರ್ಮ್ 6' ನಮೂನೆಯಲ್ಲಿ ಮಾಡಿದ ಕೆಲ ಬದಲಾವಣೆಗಳ ಬಗ್ಗೆಯೂ ಚುನಾವಣಾ ಆಯೋಗದ ಒಳಗೆ ಗೊಂದಲ ಸೃಷ್ಟಿಯಾಗಿದೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿತ್ತು.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಆನ್ಲೈನ್ ಪೋರ್ಟಲ್ನಲ್ಲಿರುವ 'ಫಾರ್ಮ್ 6'ನಲ್ಲಿ ಮಾಡಿದ ಬದಲಾವಣೆಗಳಿಗೆ ಸಂಧು ಮತ್ತು ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ಫಾರ್ಮ್ನಲ್ಲಿ ಮುಂಚಿನ 'ಎಸ್ಐಆರ್' ಪ್ರಕ್ರಿಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಹೊಸ ಫಾರ್ಮ್ನಲ್ಲಿ ಅರ್ಜಿದಾರರ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರ ಹೆಸರು ಹಳೆಯ ಮತದಾರರ ಪಟ್ಟಿಯಲ್ಲಿ ಇತ್ತೇ? ಎಂಬಿತ್ಯಾದಿ ಹೊಸ ಪ್ರಶ್ನೆಗಳನ್ನು ಕೇಳಲಾಗಿತ್ತು.
ಮೊದಲ ಬಾರಿಗೆ ಹೆಸರು ನೋಂದಾಯಿಸಿಕೊಳ್ಳಲು ಬರುವ ಯುವ ಮತದಾರರಿಗೆ ಈ ರೀತಿ ಹೊಸ ನಿಯಮ/ಪ್ರಶ್ನೆಗಳನ್ನು ತಂದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆ ಇಬ್ಬರೂ ಚುನಾವಣಾ ಆಯುಕ್ತರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯನ್ನು ನಿರ್ವಹಿಸುವ ರೀತಿಯ ಬಗ್ಗೆ ಮತ್ತೆ ಪ್ರಶ್ನೆಗಳು ಏಳುವಂತೆ ಮಾಡಿವೆ.
ಆದರೆ, ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ 18 ವರ್ಷ ತುಂಬಿದವರು ಅಥವಾ ಶೀಘ್ರದಲ್ಲೇ 18 ವರ್ಷ ಪೂರೈಸುವವರು ಅರ್ಜಿ ಸಲ್ಲಿಸಲು 'ಫಾರ್ಮ್ 6' ಇನ್ನು ಲಭ್ಯವಿದೆ.
ಹಾಗಾಗಿ, ಪ್ರಸ್ತುತ ಪ್ರಶ್ನೆ ಇರುವುದು ಯುವಕರು ಅರ್ಜಿ ಹಾಕಬಹುದೇ ಅಥವಾ ಇಲ್ಲವೇ ಎಂಬುದಷ್ಟೇ ಅಲ್ಲ. ಪ್ರತಿ ವರ್ಷ ನಿಯಮಿತವಾಗಿ ನಡೆಯಬೇಕಿದ್ದ ಪಟ್ಟಿ ತಿದ್ದುಪಡಿ ಕೆಲಸ ಏಕಾಗಿ ಬಾಕಿ ಉಳಿದಿದೆ ಮತ್ತು ಹೊಸ ಯುವ ಮತದಾರರನ್ನು ಆಯೋಗ ಹೇಗೆ ಪಟ್ಟಿಗೆ ಸೇರಿಸಿಕೊಳ್ಳುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಪ್ರತಿ ವರ್ಷ ಲಕ್ಷಾಂತರ ಯುವಕರು ಹೊಸದಾಗಿ ಮತದಾನದ ಹಕ್ಕು ಪಡೆಯುತ್ತಿರುವುದರಿಂದ, ಅವರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದೆ.