ನವದೆಹಲಿ, ಸೆ.24 (DaijiworldNews/AA): ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನವೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣಾ ಆಯೋಗದ ಕಾರ್ಯಾಚರಣೆ ಕುರಿತಾದ ಆಂಗ್ಲ ಪತ್ರಿಕೆಯೊಂದರ ವರದಿ ಆಧರಿಸಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಬಿಜೆಪಿಗೆ 'ಆಡಳಿತ ವಿರೋಧಿ ಅಲೆ' ಎದುರಾಗುತ್ತಿಲ್ಲ ಎಂದು ಆರೋಪಿಸಿದ್ದರು. ಇದೀಗ ಈ ಆರೋಪಗಳಿಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಿಜವಾದ ಆಡಳಿತ ವಿರೋಧಿ ಅಲೆ ಇರುವುದೇ ಗಾಂಧಿ ಕುಟುಂಬದ ವಿರುದ್ಧ. ರಾಹುಲ್ ಗಾಂಧಿ ರಾಜಕೀಯ ನಾಟಕಗಳ ಮಾಸ್ಟರ್. ಕಾಂಗ್ರೆಸ್ಗೆ ತನ್ನ ಸ್ವಂತ ಬಲದ ಮೇಲೆ ಒಂದೇ ಒಂದು ಚುನಾವಣೆಯನ್ನೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಪ್ರಿಯಾಂಕಾ ಗಾಂಧಿ ವಯನಾಡ್ ಕ್ಷೇತ್ರವನ್ನು ಗೆದ್ದಿರುವುದೇ ಮುಸ್ಲಿಂ ಲೀಗ್ ಬೆಂಬಲದಿಂದ. ಪಶ್ಚಿಮ ಬಂಗಾಳದಲ್ಲಿ 1977ರಿಂದೀಚೆಗೆ ಕಾಂಗ್ರೆಸ್ ಸರ್ಕಾರವಿಲ್ಲ. ಬಿಹಾರದಲ್ಲಿ 1990ರಿಂದ, ಉತ್ತರ ಪ್ರದೇಶದಲ್ಲಿ 1989ರಿಂದ ಹಾಗೂ ಒಡಿಶಾದಲ್ಲಿ 1999ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.