ಶ್ರೀನಗರ, ಸೆ.25 (DaijiworldNews/AK):ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು.

ಸದನದ ಕಲಾಪ ಆರಂಭವಾದ ತಕ್ಷಣ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ʻʻಮತವನ್ನ ರಕ್ಷಿಸಿ, ಪ್ರಜಾಪ್ರಭುತ್ವವನ್ನು ರಕ್ಷಿಸಿʻʻ ಎಂಬ ಬ್ಯಾನರ್ಗಳನ್ನು ಹಿಡಿದ ಕಾಂಗ್ರೆಸ್ ಶಾಸಕರು ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಸ್ಪೀಕರ್ ಅಬ್ದುಲ್ ರಹೀಮ್ ರಾಥರ್, ಶಾಸಕರಾದ ನಿಜಾಮುದ್ದೀನ್ ಭಟ್, ಇರ್ಫಾನ್ ಹಫೀಜ್ ಲೋನ್ ಮತ್ತು ಇಫ್ತಿಕರ್ ಅವರನ್ನು ಸದನದೊಳಗೆ ಬ್ಯಾನರ್ಗಳನ್ನು ತಂದಿದ್ದಕ್ಕಾಗಿ ಪ್ರಶ್ನಿಸಿದರು. ಇಲ್ಲಿ ಬ್ಯಾನರ್ಗಳನ್ನು ತರಲು ನಿಮಗೆ ಯಾರು ಅನುಮತಿ ನೀಡಿದ್ದಾರೆ? ಅವುಗಳನ್ನು ತೆಗೆದಿಡಿ ಎಂದು ಸ್ಪೀಕರ್ ಕೇಳಿದರು.
ಭಾರತದ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವ್ಯಾಪ್ತಿಯಲ್ಲಿಲ್ಲ. ಇಸಿಐ ನಮ್ಮ ನಿಯಂತ್ರಣದಲ್ಲಿಲ್ಲ. ನಾನು ಅದನ್ನು ಅನುಮತಿಸಿಲ್ಲ. ಇದು ಪ್ರಶ್ನೋತ್ತರ ಸಮಯ. ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ನಿಮ್ಮ ಆಸನಗಳಲ್ಲಿ ಕುಳಿತುಕೊಳ್ಳಿ ಎಂದು ಹೇಳುವ ಮೂಲಕ ಸ್ಪೀಕರ್ ಕೈ ಶಾಸಕರಿಗೆ ಎಚ್ಚರಿಸಿದರು