ಬಳ್ಳಾರಿ, ಸೆ.25 (DaijiworldNews/TA): ವೇಗವಾಗಿ ಬಂದ ಡೆಮು ರೈಲು ಹಳಿಗೆ ಅಡ್ಡಬಂದ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದಿದೆ.

ಮರಿಯಮ್ಮನಹಳ್ಳಿ ನಿವಾಸಿ ಕಾಳಪ್ಪ ಅವರು ಎಂದಿನಂತೆ ತಮ್ಮ ಎಮ್ಮೆಗಳ ಹಿಂಡನ್ನು ಮೇಯಿಸಲು ಕರೆದೊಯ್ದಿದ್ದರು. ಈ ವೇಳೆ ಎಮ್ಮೆಗಳು ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ಡೆಮು ರೈಲು ಅವುಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಂಟು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕಾಳಪ್ಪ ಅವರ ಕುಟುಂಬವು ಹೈನುಗಾರಿಕೆಯನ್ನೇ ಪ್ರಮುಖ ಜೀವನೋಪಾಯವನ್ನಾಗಿ ಮಾಡಿಕೊಂಡಿತ್ತು. ಮನೆಯ ದಿನನಿತ್ಯದ ಆದಾಯಕ್ಕೆ ಆಧಾರವಾಗಿದ್ದ ಎಂಟು ಎಮ್ಮೆಗಳನ್ನೂ ಒಂದೇ ಘಟನೆಯಲ್ಲಿ ಕಳೆದುಕೊಂಡಿರುವುದರಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಏಕಾಏಕಿ ಸಂಭವಿಸಿದ ಈ ದುರಂತದಿಂದ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸರ್ಕಾರ ಹಾಗೂ ರೈಲ್ವೆ ಇಲಾಖೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.