ಕೊಡಗು, ಸೆ.25 (DaijiworldNews/TA): ಕೊಡಗು ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಜಿಟಿಜಿಟಿ ಮಳೆ ಮುಂದುವರಿದಿದ್ದು, ಇದರ ನಡುವೆ ಜಿಲ್ಲೆಯ ಹಲವೆಡೆ ಗಾಢ ಕೆಂಪು ಬಣ್ಣದ ಮಳೆನೀರು ಸುರಿದಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ವಿರಾಜಪೇಟೆ ತಾಲ್ಲೂಕಿನ ಕುಕನೂರು, ಬಿಟ್ಟಂಗಾಲ ಹಾಗೂ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಮರಗೋಡು ಸೇರಿದಂತೆ ವಿವಿಧೆಡೆ ಕೆಂಪು ಬಣ್ಣದ ಮಳೆನೀರು ಕಂಡುಬಂದಿದೆ ಎನ್ನಲಾಗಿದೆ. ಸಾಮಾನ್ಯ ಮಳೆಯ ಬದಲು ಕೆಂಪು ಬಣ್ಣದಲ್ಲಿ ನೀರು ಸುರಿದಿರುವುದು ಜನರಲ್ಲಿ ಕುತೂಹಲದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ.
ಈ ರೀತಿಯ ಮಳೆನೀರು ಸುರಿಯಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಳೆನೀರಿನ ಬಣ್ಣ ಬದಲಾಗಿರುವುದಕ್ಕೆ ವೈಜ್ಞಾನಿಕ ಕಾರಣವೇನು ಎಂಬುದನ್ನು ತಿಳಿಯಲು ಕೆಂಪು ಬಣ್ಣದ ಮಳೆನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಳೆನೀರಿನ ಬಣ್ಣಕ್ಕೆ ಕಾರಣವಾಗಿರುವ ಅಂಶಗಳ ಕುರಿತು ವೈಜ್ಞಾನಿಕ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.