ಬೆಂಗಳೂರು, ಸೆ.25 (DaijiworldNews/TA): ಭೂ ಸುಧಾರಣೆ ಕಾಯ್ದೆಯ ಮೂಲ ಸ್ವರೂಪವನ್ನು ಮರುಸ್ಥಾಪಿಸುವ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ನ ಹಿರಿಯ ಶಾಸಕ ಬಿಆರ್ ಪಾಟೀಲ್ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭೂ ಸುಧಾರಣೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರದಿರುವ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಅಲ್ಲದೆ, “ನಮಗೂ ಬಿಜೆಪಿಗೂ ವ್ಯತ್ಯಾಸ ಏನು?” ಎಂದು ಪ್ರಶ್ನಿಸಿದ್ದಾರೆ.

ಬಿಆರ್ ಪಾಟೀಲ್ ಅವರ ಪ್ರಕಾರ, ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ 79A, 79B ಮತ್ತು 79C ಕಲಂಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡಿತ್ತು. 2020ರ ತಿದ್ದುಪಡಿಯಲ್ಲಿ ಈ ಮೂರು ಕಲಂಗಳನ್ನು ಕಾಯ್ದೆಯಿಂದ ಕೈಬಿಡಲಾಗಿತ್ತು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಅದರ ಮೂಲ ಸ್ವರೂಪದಲ್ಲಿ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಹಲವು ವರ್ಷಗಳಾದರೂ ಈ ಸಂಬಂಧ ತಿದ್ದುಪಡಿ ಪ್ರಸ್ತಾವನೆ ಮುಂದಿಟ್ಟಿಲ್ಲ ಎಂದು ಬಿಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದೇನೆ. ಆದರೆ ತಿದ್ದುಪಡಿ ಪ್ರಸ್ತಾವನೆ ಇಲ್ಲ ಎಂದು ಉತ್ತರಿಸಲಾಗಿದೆ. ಹಾಗಾದರೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ಏಕೆ ನೀಡಲಾಗಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ. 79A, 79B ಮತ್ತು 79C ಕಲಂಗಳಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಬದಲಾವಣೆಗಳನ್ನು ಕಾಂಗ್ರೆಸ್ ವಿರೋಧಿಸಿತ್ತು. ರೈತ ಸಂಘಟನೆಗಳ ಸಭೆಗಳಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು ಎಂದು ಬಿಆರ್ ಪಾಟೀಲ್ ಹೇಳಿದ್ದಾರೆ. “ಮೂಲ ಸ್ವರೂಪವನ್ನು ಮರಳಿ ತರುತ್ತೇವೆ ಎಂದು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಆದರೆ ಅದನ್ನು ಈಡೇರಿಸದಿದ್ದರೆ, ಹಿಂದಿನ ಸರ್ಕಾರದ ತಿದ್ದುಪಡಿಗೆ ಬೆಂಬಲ ನೀಡಿದಂತಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರವನ್ನು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದಾಗಿ ಬಿಆರ್ ಪಾಟೀಲ್ ಹೇಳಿದ್ದಾರೆ. ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರ್ಧಾರವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಬಜೆಟ್ ದಾಖಲೆಯಿಂದ ವಿಚಾರ ಕೈಬಿಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇದೀಗ ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೂ ತಾವು ಈ ವಿಚಾರ ಪ್ರಸ್ತಾಪಿಸಿರುವುದಾಗಿ ಬಿಆರ್ ಪಾಟೀಲ್ ತಿಳಿಸಿದ್ದಾರೆ.
ಭೂ ಸುಧಾರಣೆ ಕಾಯ್ದೆಯ ವಿಚಾರದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿರುವ ಬಿಆರ್ ಪಾಟೀಲ್, ಈ ಸಂಬಂಧ ರಾಹುಲ್ ಗಾಂಧಿಗೂ ಪತ್ರ ಬರೆಯುವುದಾಗಿ ಹೇಳಿದ್ದಾರೆ. ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರರು, ಚಿಂತಕರು, ಲೇಖಕರು ಹಾಗೂ ಹೋರಾಟಗಾರರು ಈ ವಿಚಾರದಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, 79A, 79B ಮತ್ತು 79C ಕಲಂಗಳನ್ನು 2020ರಲ್ಲಿ ಕೈಬಿಡಲಾಗಿದ್ದು, ನಂತರದ 2025ರ ಕರ್ನಾಟಕ ಭೂ ಸುಧಾರಣೆ ಮತ್ತು ಇತರೆ ಕಾನೂನುಗಳ ತಿದ್ದುಪಡಿ ಕಾಯ್ದೆಯಲ್ಲಿ ಈ ಮೂರು ಕಲಂಗಳ ಮರುಸ್ಥಾಪನೆ ಕಾಣಿಸುವುದಿಲ್ಲ. ಭೂ ಸುಧಾರಣೆ ಕಾಯ್ದೆಯ ಮೂಲ ಸ್ವರೂಪಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಂದಿನ ನಡೆ ಏನು ಎಂಬುದು ಇದೀಗ ಗಮನ ಸೆಳೆದಿದೆ.