ಸಿಕ್ಕಿಂ, ಸೆ.26 (DaijiworldNews/TA): ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಸಿಕ್ಕಿಂನಲ್ಲಿ ಭೂಕುಸಿತ ಸಂಭವಿಸಿದ್ದು, ಗ್ಯಾಲ್ಶಿಂಗ್ ಜಿಲ್ಲೆಯ ರಿಂಬಿ ಗ್ರಾಮದಲ್ಲಿ ಭಾರೀ ಹಾನಿ ಉಂಟಾಗಿದೆ. ಸರ್ಕಾರಿ ವಸತಿಗೃಹಗಳು ಸೇರಿದಂತೆ ಹಲವು ಮನೆಗಳು ಭೂಕುಸಿತಕ್ಕೆ ಸಿಲುಕಿ ಕುಸಿದು ಬಿದ್ದಿವೆ.

ಭೂಕುಸಿತದಲ್ಲಿ ಸುಮಾರು 30 ಮನೆಗಳು ಕೊಚ್ಚಿ ಹೋಗಿರುವುದಾಗಿ ವರದಿಯಾಗಿದ್ದು, ಸದ್ಯದವರೆಗೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಭೂಕುಸಿತದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಿಂಬಿ ಸೇರಿದಂತೆ ಅಪಾಯ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಪಾಯದ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂತ್ರಸ್ತರ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವಂತೆ ಸ್ಥಳೀಯ ಆಡಳಿತಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಜನರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ. ಇದರ ನಡುವೆ, ಗ್ಯಾಂಗ್ಟಕ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾಗಿರುವ ಹಾನಿಯ ಪರಿಶೀಲನೆ ಆರಂಭವಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಳೆ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ರಸ್ತೆಗಳು ಹಾನಿಗೊಳಗಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ರಸ್ತೆಗಳ ಜೊತೆಗೆ ಇತರೆ ಮೂಲಸೌಕರ್ಯಗಳಿಗೂ ಹಾನಿಯಾಗಿರುವ ವರದಿಗಳು ಬಂದಿವೆ. ಸಿಚೆ ಪ್ರದೇಶದಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕವೂ ಭಾರಿ ಮಳೆಯಿಂದ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.
ಭೂಕುಸಿತದ ಅಪಾಯ ಇರುವ ಪ್ರದೇಶಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ವೇಳೆ ಅನಗತ್ಯ ಸಂಚಾರವನ್ನು ತಪ್ಪಿಸುವಂತೆ ಸ್ಥಳೀಯ ನಿವಾಸಿಗಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳ ಸಮೀಪ ವಾಸಿಸುವವರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಯಾವುದೇ ಅಪಾಯದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನಿರಂತರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಿಕ್ಕಿಂನಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.