ಪಾಟ್ನಾ, ಸೆ.26 (DaijiworldNews/TA): ಪ್ರಯಾಣಿಕ ರೈಲುಗಳಲ್ಲಿ ಪೊಲೀಸ್, ಆರ್ಪಿಎಫ್, ಎಸ್ಟಿಎಫ್ ಅಧಿಕಾರಿಯಂತೆ ನಟಿಸಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭೋಜ್ಪುರ ಜಿಲ್ಲೆಯ ಬಾರಿಸ್ವಾನ್ ಗ್ರಾಮದ ನಿವಾಸಿ ರೋಹಿತ್ ತಿವಾರಿ ಎಂದು ಗುರುತಿಸಲಾಗಿದೆ.

ಆರೋಪಿಯು ವಿಶೇಷವಾಗಿ ಕಾರ್ಮಿಕರು ಹಾಗೂ ಯುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಧೂಮಪಾನ ಅಥವಾ ಟಿಕೆಟ್ ಸಂಬಂಧಿತ ನಿಯಮ ಉಲ್ಲಂಘನೆಯ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ನೀಡಲು ಅಥವಾ ದಂಡ ಪಾವತಿಸಲು ನಿರಾಕರಿಸಿದ ಪ್ರಯಾಣಿಕರ ಮೇಲೆ ಹಲ್ಲೆ ಮಾಡುತ್ತಿದ್ದ ಆರೋಪವೂ ಇದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ವೈಶಾಲಿ ಜಿಲ್ಲೆಯ 21 ವರ್ಷದ ನಿತಿನ್ ಕುಮಾರ್ ನಾಪತ್ತೆಯಾದ ಬಳಿಕ. ಹೈದರಾಬಾದ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನಿತಿನ್, ಹೈದರಾಬಾದ್-ದಾನಾಪುರ ವಿಶೇಷ ರೈಲು 07091ರಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಆರೋಪಿಗಳು ಆತನನ್ನು ರೈಲಿನಿಂದ ಇಳಿಸಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 20ರ ರಾತ್ರಿ ಸುಮಾರು 10 ಗಂಟೆಗೆ ನಿತಿನ್ ತನ್ನ ಕುಟುಂಬಕ್ಕೆ ಕರೆ ಮಾಡಿ, ಸಿಗರೇಟ್ ಸೇದಿದ್ದಕ್ಕಾಗಿ ಕೆಲವರು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ರೈಲಿನಿಂದ ಬಲವಂತವಾಗಿ ಇಳಿಸಿದ್ದಾರೆ ಎಂದು ತಿಳಿಸಿದ್ದ. ತಾನು ಬಕ್ಸಾರ್ ರೈಲು ನಿಲ್ದಾಣದ ಸಮೀಪದಲ್ಲಿರುವುದಾಗಿ ತಿಳಿಸಿದ್ದ ನಿತಿನ್, ಬಳಿಕ ಆರೋಪಿಗಳು ತನ್ನ ಮೊಬೈಲ್ ಫೋನ್ ಕಸಿದುಕೊಂಡಿದ್ದು, ಕುಟುಂಬದಿಂದ ರೂ. 10,000ಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದ. ಮರುದಿನ ಕುಟುಂಬದವರು ರೂ. 5,000 ಹಣವನ್ನು ನಿತಿನ್ ಖಾತೆಗೆ ವರ್ಗಾಯಿಸಿದ್ದರು. ಆದರೆ ಬಳಿಕ ಆತನ ಮೊಬೈಲ್ನಿಂದ ರೂ.20,000ಕ್ಕೆ ಮತ್ತೊಮ್ಮೆ ಬೇಡಿಕೆ ಬಂದಿದ್ದು, ದಿನವಿಡೀ ಹಲವು ಕರೆಗಳು ಬಂದರೂ ನಿತಿನ್ನೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗಿರಲಿಲ್ಲ.
ಕುಟುಂಬಕ್ಕೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಗ್ರಾಮ ಮುಖ್ಯಸ್ಥರೊಂದಿಗೆ ಬಕ್ಸಾರ್ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಲಾಗಿತ್ತು. ದಾನಾಪುರ ರೈಲ್ವೆ ಡಿಎಸ್ಪಿ ಕಾಂಚನ್ ರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರ ಮಾಹಿತಿಯ ಆಧಾರದ ಮೇಲೆ ತನಿಖೆ ಆರಂಭಿಸಲಾಯಿತು. ತನಿಖೆಯ ಬಳಿಕ ಬಕ್ಸಾರ್ ಮತ್ತು ಬನಾರಸ್ ನಡುವಿನ ಮೋಹನ್ಸರೈ ಪ್ರದೇಶದಲ್ಲಿ ರೋಹಿತ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ವಿಚಾರಣೆ ವೇಳೆ ತಿವಾರಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅರಾ ಮತ್ತು ಜಗಜೀವನ್ ಹಾಲ್ಟ್ ನಡುವಿನ ರೈಲು ಹಳಿಗಳ ಬಳಿ ಶವವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಶವವನ್ನು ನಿತಿನ್ ಕುಮಾರ್ ಅವರದ್ದೆಂದು ತಂದೆ ಮುಖೇಶ್ ರೈ ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದಿಂದ ಹಣ ಪಡೆಯುವ ಪ್ರಯತ್ನ ವಿಫಲವಾದ ಬಳಿಕ ನಿತಿನ್ ಅವರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಲಾಗಿದೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಿವಾರಿ ಈ ರೀತಿಯ ಕೃತ್ಯಗಳಲ್ಲಿ ಹಿಂದಿನಿಂದಲೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯಂತೆ ನಟಿಸಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಶಹಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ, ಬಕ್ಸಾರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಹಿಂದಿನ ಪ್ರಕರಣ ಹಾಗೂ ಸೆಪ್ಟೆಂಬರ್ 9ರಂದು ದಾನಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.
ಆರೋಪಿಯು ಈ ಹಿಂದೆ ಸುಮಾರು 25 ತಿಂಗಳು ಜೈಲಿನಲ್ಲಿ ಕಳೆದಿದ್ದು, ಎರಡು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ವೇಳೆ ಆತನಿಂದ ಕಂದು ಬಣ್ಣದ ಕೈಚೀಲವೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಎಟಿಎಂ ಕಾರ್ಡ್ಗಳು, ಪ್ಯಾನ್ ಕಾರ್ಡ್, ಅಂಗವೈಕಲ್ಯ ಪ್ರಮಾಣಪತ್ರ ಹಾಗೂ ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ. ಆರೋಪಿಯ ಆಧಾರ್ ಕಾರ್ಡ್ನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.