ನವದೆಹಲಿ,ಸೆ.26 (DaijiworldNews/AK): ಮತದಾರರ ಪಟ್ಟಿಯ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಬಗೆಗಿನ ವರದಿಗಳು ಹಾಗೂ ಸರಣಿ ವಿವಾದಗಳ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಇಂದು ತನ್ನ ಮಹತ್ವದ ಸಭೆಯನ್ನು ನಡೆಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಉಪಸ್ಥಿತಿಯಲ್ಲಿ ದೆಹಲಿಯಲ್ಲಿ ಈ ಸಭೆ ನಡೆಯಿತು. ಈ ಸಭೆಯ ನಂತರ ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ, ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಯವರ ಪತ್ರ ಹಾಗೂ ಹೊಸ ಮತದಾರರ ನೋಂದಣಿಯ ಫಾರ್ಮ್ 6 ಕುರಿತು ಸ್ಪಷ್ಟನೆಗಳನ್ನು ನೀಡಿದೆ.
ಎಸ್ಐಆರ್ ಅಭಿಯಾನಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸುವ ಕುರಿತು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಯವರಿಗೆ ಬರೆದಿದ್ದ ಪತ್ರದ ವಿಚಾರದಲ್ಲಿ ಎದ್ದಿದ್ದ ವದಂತಿಗಳಿಗೆ ಆಯೋಗ ತೆರೆ ಎಳೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಹಾಗೂ ಚುನಾವಣಾ ಕಾರ್ಯಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಒದಗಿಸುವುದು ಸಂವಿಧಾನದ ವಿಧಿ 324(6)ರ ಅಡಿಯಲ್ಲಿ ಚುನಾವಣಾ ಆಯೋಗಕ್ಕಿರುವ ಹಕ್ಕಾಗಿದೆ. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಿಬ್ಬಂದಿಗಳ ನಿಯೋಜನೆ, ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಅಗತ್ಯ ಮೂಲಸೌಕರ್ಯ ಹಾಗೂ ತಾಂತ್ರಿಕ ಬೆಂಬಲವನ್ನು ಸುಲಭವಾಗಿ ಒದಗಿಸಲು ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಕೋರಿಕೆ ಸಲ್ಲಿಸಲಾಗಿತ್ತೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಹೊಸ ಮತದಾರರ ಸೇರ್ಪಡೆ ಮತ್ತು ಎಸ್ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಗೊಂದಲಗಳನ್ನು ನಿವಾರಿಸಲು ಫಾರ್ಮ್ 6 ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ತಾಂತ್ರಿಕ ವ್ಯತ್ಯಾಸ ಅಥವಾ ಅನ್ಮ್ಯಾಪ್ ಆಗಿರುವ ನಾಗರಿಕರು ಹೊಸದಾಗಿ ‘ಫಾರ್ಮ್ 6’ ಭರ್ತಿ ಮಾಡುವ ಅಗತ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಸೇರಲು ಅರ್ಹತೆಯನ್ನು ಹೊಂದಿರುವ, ಇದೇ ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಹೊಸ ಮತದಾರರು ಮಾತ್ರ ಫಾರ್ಮ್ 6 ಅನ್ನು ಬಳಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.