ಲಕ್ನೋ, ಸೆ.27 (DaijiworldNews/TA): ಉತ್ತರ ಪ್ರದೇಶದಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ, ಗುಡುಗು-ಮಿಂಚು ಹಾಗೂ ಇತರೆ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, 117 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಮಂದಿ ಗಾಯಗೊಂಡಿದ್ದು, ನಾಲ್ಕು ಜಾನುವಾರುಗಳು ಮೃತಪಟ್ಟಿವೆ.

ರಾಜ್ಯದ 75 ಜಿಲ್ಲೆಗಳ ಪೈಕಿ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಬರೋಬ್ಬರಿ 19 ಪಟ್ಟು ಹೆಚ್ಚು ಮಳೆ ದಾಖಲಾಗಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಕೃಷಿ ಬೆಳೆಗಳಿಗೂ ಹಾನಿಯಾಗಿದೆ. ರಾಜಧಾನಿ ಲಕ್ನೋದಲ್ಲಿ ಕೇವಲ 21 ಗಂಟೆಗಳ ಅವಧಿಯಲ್ಲಿ 125.8 ಮಿ.ಮೀ ಮಳೆ ದಾಖಲಾಗಿದ್ದು, ಹಲವು ರಸ್ತೆಗಳು ಜಲಾವೃತಗೊಂಡಿವೆ. ಫರೂಕಾಬಾದ್ನಲ್ಲಿ ವಾಡಿಕೆಗಿಂತ 200 ಪಟ್ಟು ಹೆಚ್ಚು ಮಳೆಯಾಗಿದ್ದರೆ, ಕಾನ್ಪುರ ನಗರದಲ್ಲಿ 160 ಪಟ್ಟು ಹೆಚ್ಚಿನ ಮಳೆ ದಾಖಲಾಗಿದೆ. ಕನ್ನೌಜ್, ಕಾನ್ಪುರ ದೇಹತ್ ಮತ್ತು ಹರ್ದೋಯಿ ಜಿಲ್ಲೆಗಳಲ್ಲಿ ವಾಡಿಕೆಗಿಂತ 130 ಪಟ್ಟು ಹೆಚ್ಚು ಮಳೆಯಾಗಿದೆ.
ಈಶಾನ್ಯ ಮಧ್ಯಪ್ರದೇಶ ಹಾಗೂ ಉತ್ತರ ಛತ್ತೀಸ್ಗಢದ ಭಾಗದಲ್ಲಿ ರೂಪುಗೊಂಡಿದ್ದ ವಾಯುಭಾರ ಕುಸಿತವು ಉತ್ತರ ಪ್ರದೇಶದತ್ತ ಚಲಿಸಿರುವ ಹಿನ್ನೆಲೆಯಲ್ಲಿ ಮಳೆ ಚುರುಕಾಗಿದೆ. ಸೆಪ್ಟೆಂಬರ್ 27ರಂದು ಪೂರ್ವ ಉತ್ತರ ಪ್ರದೇಶದಲ್ಲಿ ಭಾರಿ ಮಳೆಯ ಜೊತೆಗೆ ಪಶ್ಚಿಮ ಉತ್ತರ ಪ್ರದೇಶದಲ್ಲೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆಯನ್ನೂ ಸೂಚಿಸಲಾಗಿದೆ. ಮುಂದಿನ ಅವಧಿಯಲ್ಲಿ ತಗ್ಗು ಪ್ರದೇಶಗಳು ಹಾಗೂ ನದಿ ಪಾತ್ರಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿಂದಾಗಿ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೇಪಾಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲೂ ವಿಶೇಷ ನಿಗಾ ವಹಿಸಲಾಗಿದೆ.
ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಅಪಾಯದಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹಾಗೂ ಮನೆ ಮತ್ತು ಬೆಳೆ ಹಾನಿಯ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿರಿಸಲಾಗಿದೆ.
ಭಾರಿ ಮಳೆ ಹಾಗೂ ಜಲಾವೃತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪ್ರಯಾಗ್ರಾಜ್ನಲ್ಲಿ ಸೆಪ್ಟೆಂಬರ್ 26ರಂದು ಪ್ರಾಥಮಿಕ ಹಂತದ ಹಲವು ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗಿತ್ತು. ಮುಂದಿನ ಕೆಲವು ಗಂಟೆಗಳಲ್ಲೂ ಮಳೆಯ ಪ್ರಮಾಣದ ಮೇಲೆ ಜಿಲ್ಲಾಡಳಿತಗಳು ನಿಗಾ ಇರಿಸಿದ್ದು, ತಗ್ಗು ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.