ಗೋರಖ್ಪುರ, ಸೆ.29 (DaijiworldNews/AK): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಹೀಗೆ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 26 ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ಇಷಿತಾ ಶರ್ಮಾ ಅವರ ಯಶೋಗಾಥೆ ಇದು.

ಉತ್ತರ ಪ್ರದೇಶದ ಗೋರಖ್ಪುರದವರಾದ ಇಷಿತಾ ಶರ್ಮಾ ಅವರ ತಂದೆ ಡಿ.ಕೆ. ಶರ್ಮಾ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆ, ತಾಯಿ ಅರ್ಚನಾ ಶರ್ಮಾ ಗೃಹಿಣಿ. ಇಷಿತಾ ಅವರಿಗೆ ಓರ್ವ ಹಿರಿಯ ಸಹೋದರ ಕೂಡ ಇದ್ದಾರೆ.
ಇಷಿತಾ ಶರ್ಮಾ ಅವರು 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆದಾಗಲೇ ಐಎಎಸ್ ಅಧಿಕಾರಿಯಾಗುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ನಂತರ ನವದೆಹಲಿಯ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಮತ್ತು ಎಂ.ಕಾಂ ಶಿಕ್ಷಣ ಪೂರ್ಣಗೊಳಿಸಿದರು. ವಾಣಿಜ್ಯ ವಿಷಯದಲ್ಲಿದ್ದ ಅವರ ಬಲವಾದ ಶೈಕ್ಷಣಿಕ ಹಿನ್ನೆಲೆಯು, ಮುಂದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಕಾಮರ್ಸ್ (ವಾಣಿಜ್ಯ) ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲು ಹಾಗೂ ಉತ್ತಮ ಸಿದ್ಧತೆ ನಡೆಸಲು ಪ್ರಮುಖ ಕಾರಣವಾಯಿತು.
ಇಷಿತಾ ಶರ್ಮಾ ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆಯನ್ನು ತೇರ್ಗಡೆಯಾಗಲು ಸಾಧ್ಯವಾಗದೆ ಮೇನ್ಸ್ ಹಂತಕ್ಕೇ ತಲುಪಲಿಲ್ಲ. ತಮ್ಮ ಎರಡು ವಿಫಲ ಯತ್ನಗಳ ಬಳಿಕವೂ ಅವರು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಆದರೆ ತಮ್ಮ ಮೂರನೇ ಪ್ರಯತ್ನದಲ್ಲೂ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. 2025ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 26ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.
ಯಾವುದೇ ಕೋಚಿಂಗ್ ಸೆಂಟರ್ಗೆ ತೆರಳದೇ ಇಷಿತಾ ಅವರು ಸ್ವಂತವಾಗಿ ಅಧ್ಯಯನ ನಡೆಸಿದರು. ಶಿಸ್ತುಬದ್ಧ ಸ್ವಯಂ ಅಧ್ಯಯನ, ಆಯ್ದ ಆನ್ಲೈನ್ ಮಾರ್ಗದರ್ಶನ, ನಿರಂತರ ಪುನರಾವರ್ತನೆ, ಮಾದರಿ ಪರೀಕ್ಷೆಗಳು ಮತ್ತು ಉತ್ತರ ಬರೆಯುವ ಅಭ್ಯಾಸ ಅವರ ಯಶಸ್ಸಿನ ಸೂತ್ರವಾಗಿತ್ತು. ತಮ್ಮ ನಿರಂತರ ಪ್ರಯತ್ನದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.