ಬೆಂಗಳೂರು, ಸೆ.29 (DaijiworldNews/TA): DPAR ವ್ಯಾಪ್ತಿಯ ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ ಹಾಗೂ ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ಗೆ ಸಂಬಂಧಿಸಿದ ರೂ. 444 ಕೋಟಿ ಮೊತ್ತದ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಐಎಎಸ್ ಅಧಿಕಾರಿ ಭೂಬಾಲನ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ದಾಖಲೆಗಳ ಸಮೇತ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. 2025ರಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅರ್ಹತೆ ಇಲ್ಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂಬುದು ದೂರುದಾರರ ಆರೋಪ. ಹೈದರಾಬಾದ್ ಮೂಲದ ಕಂಪನಿಯೊಂದಕ್ಕೆ ಅರ್ಹತೆ ಇಲ್ಲದಿದ್ದರೂ ಟೆಂಡರ್ ನೀಡಲಾಗಿದೆ ಎಂದು ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಯೇ DPAR ಇಲಾಖೆ ಇತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಯತೀಂದ್ರ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂಬ ಆರೋಪವನ್ನೂ ರಮೇಶ್ ಮಾಡಿದ್ದಾರೆ.
ಇ-ಆಡಳಿತ ವಿಭಾಗದ ಸಿಇಒ ಆಗಿರುವ ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳ ವಿರುದ್ಧವೂ ದೂರು ಸಲ್ಲಿಸಲಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಎನ್.ಆರ್. ರಮೇಶ್ ಲೋಕಾಯುಕ್ತರನ್ನು ಒತ್ತಾಯಿಸಿದ್ದಾರೆ.