ದೆಹಲಿ, ಸೆ.29 (DaijiworldNews/AA): ಭಾರತದಲ್ಲಿ ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳು ಮತ್ತು ನಕಲಿ ಸಂದೇಶಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದೆ. ಗ್ರಾಹಕರ ದೂರಿನ ಅವಶ್ಯಕತೆಯಿಲ್ಲದೆ ಸ್ಪ್ಯಾಮರ್ಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲು ಟೆಲಿಕಾಂ ಸಂಸ್ಥೆಗಳಿಗೆ ಅಧಿಕಾರ ನೀಡಿ ಟ್ರಾಯ್ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಸ್ಪ್ಯಾಮ್ ಕರೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಟೆಲಿಕಾಂ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿರುವ ಟ್ರಾಯ್, ಎಐ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ಕರೆಗಳನ್ನು ನಿರ್ಬಂಧಿಸಲು ಆದೇಶಿಸಲಾಗಿದೆ. ಗ್ರಾಹಕರು ದೂರು ಕೊಡದೇ ಇದ್ದರೂ ಸ್ಪ್ಯಾಮ್ ಕರೆಗಾರರ ವಿರುದ್ಧ ಕ್ರಮ ಕೈಗೊಳ್ಳಲು ಟೆಲಿಕಾಂ ಸಂಸ್ಥೆಗಳಿಗೆ ಅವಕಾಶ ಮತ್ತು ಅಧಿಕಾರ ಸಿಗಲಿದೆ. ಇನ್ನು ನಿಯಮ ಉಲ್ಲಂಘಿಸುವವರಿಗೆ ದಂಡ ಹಾಗೂ ಪರವಾನಗಿ ರದ್ದತಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ಆಟೊಮೇಟ್ ಸ್ಪ್ಯಾಮರ್ಗಳ ವಿರುದ್ಧ ಟೆಲಿಕಾಂ ಆಪರೇಟರ್ಗಳು ನೇರವಾಗಿ ಕ್ರಮ ತೆಗೆದುಕೊಳ್ಳುವುದು ಕಡ್ಡಾಯ. ಈ ಸ್ಪ್ಯಾಮರ್ಗಳ ಕೆವೈಸಿ ವಿವರದ ಪುನರ್ಪರಿಶೀಲನೆ, ಔಟ್ಗೋಯಿಂಗ್ ಕರೆಗಳನ್ನು ನಿರ್ಬಂಧಿಸುವುದು, ಸಂಪನ್ಮೂಲಗಳನ್ನು ಡಿಸ್ಕನೆಕ್ಟ್ ಮಾಡುವುದು, ಬಾರಿ ಬಾರಿ ತಪ್ಪು ಮಾಡಿದವರನ್ನು ಕಾನೂನು ಕ್ರಮಕ್ಕೆ ಒಪ್ಪಿಸುವುದು ಇತ್ಯಾದಿ ಕ್ರಮ ತೆಗೆದುಕೊಳ್ಳಬಹುದು.
ಏರ್ಟೆಲ್, ಜಿಯೋ, ವಿಐ ಮತ್ತು ಬಿಎಸ್ಎನ್ಎಲ್ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ ಆಧಾರಿತ ನೆಟ್ವರ್ಕ್ ಫಿಲ್ಟರ್ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಇವು ನಕಲಿ ಮತ್ತು ಸ್ಪ್ಯಾಮ್ ಸಂದೇಶ/ಕರೆಗಳನ್ನು ಗ್ರಾಹಕರನ್ನು ತಲುಪುವ ಮುನ್ನವೇ ಪತ್ತೆ ಹಚ್ಚುತ್ತವೆ. ಒಳಬರುವ ಕರೆಯು ಶಂಕಿತ ಸ್ಪ್ಯಾಮ್ ಎಂದು ಗುರುತಿಸಲಾಗಿದ್ದರೆ, ಕರೆ ಸ್ವೀಕರಿಸುವ ನೆಟ್ವರ್ಕ್ನಿಂದ ಎರಡು ಗಂಟೆಯ ಒಳಗೆ ಕರೆ ಮಾಡಲಾದ ಆಪರೇಟರ್ಗೆ ಮಾಹಿತಿ ನೀಡಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.
ಇದಾಗಿ ಒಂದು ವ್ಯವಹಾರ ದಿನದೊಳಗೆ ಕರೆ ಮಾಡಲಾದ ಆಪರೇಟಿಂಗ್ ಸಂಸ್ಥೆಯು, ಕರೆ ಮಾಡಿದವರ ಕೆವೈಸಿ ವಿವರಗಳನ್ನು ಪಡೆದು, ಎಲ್ಲಾ ಇತರ ಟೆಲಿಕಾಂ ನೆಟ್ವರ್ಕ್ಗಳಿಗೆ ಆ ಮಾಹಿತಿ ಹಂಚಬೇಕು ಎಂದು ಟ್ರಾಯ್ ತಿಳಿಸಿದೆ. ಈಗ ಎಲ್ಲಾ ಟೆಲಿಕಾಂ ಆಪರೇಟರ್ಗಳು ಆ ಮಾಹಿತಿಯನ್ನು ಪರಿಶೀಲಿಸುತ್ತವೆ. ಸ್ಪ್ಯಾಮ್ ಕರೆ ಮಾಡಿದವರಿಗೆ ಸಂಬಂಧಿಸಿದ ಇತರ ಕನೆಕ್ಷನ್ಗಳು ಹಾಗೂ ಸಂಪನ್ಮೂಲಗಳು ಕಳೆದ 10 ದಿನದಲ್ಲಿ ಬಳಕೆಯಾಗಿವೆಯಾ ಎಂಬುದನ್ನು ಈ ಸಂಸ್ಥೆಗಳು ತಮ್ಮ ಇಂಟರ್ನಲ್ ಸಿಸ್ಟಂಗಳ ಮೂಲಕ ಪರಿಶೀಲಿಸುತ್ತವೆ. ಇದಕ್ಕೆ 24 ಗಂಟೆಗಳ ಕಾಲಾವಕಾಶ ಇರುತ್ತದೆ.
ವಾಣಿಜ್ಯ ಉದ್ದೇಶಗಳಿಗಾಗಿ ಸಾಮೂಹಿಕ ಕರೆ ಅಥವಾ ಸಂದೇಶ ಕಳುಹಿಸುವ ವೈಯಕ್ತಿಕ ಸಂಖ್ಯೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಸ್ಪ್ಯಾಮ್ ನಿಯಮ ಉಲ್ಲಂಘಿಸುವ ಚಂದಾದಾರರ ಎಲ್ಲಾ ಟೆಲಿಕಾಂ ಸಂಪರ್ಕಗಳನ್ನು ಕಡಿತಗೊಳಿಸಿ, ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಸ್ಪ್ಯಾಮ್ ನಿಯಂತ್ರಿಸುವಲ್ಲಿ ವಿಫಲರಾಗುವ ಟೆಲಿಕಾಂ ಆಪರೇಟರ್ಗಳಿಗೆ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳಿಗೆ ಟ್ರಾಯ್ ಭಾರಿ ದಂಡ ವಿಧಿಸಲಿದೆ. ಮೊದಲ ಉಲ್ಲಂಘನೆಯಾದರೆ ಎಚ್ಚರಿಕೆ ಮತ್ತು ಸಣ್ಣ ಪ್ರಮಾಣದ ದಂಡ ಇರುತ್ತದೆ. ಮತ್ತೆ ಉಲ್ಲಂಘನೆಯಾದರೆ ದಂಡದ ಮೊತ್ತವು ಪ್ರತಿಯೊಂದು ಪ್ರಕರಣಕ್ಕೂ ಲಕ್ಷಾಂತರ ರೂಪಾಯಿಗಳವರೆಗೆ ಹೆಚ್ಚಾಗಲಿದೆ. ನಿರಂತರ ಉಲ್ಲಂಘನೆ ಆಗುತ್ತಿದ್ದರೆ ನೊಂದಾಯಿತ ಟೆಲಿಮಾರ್ಕೆಟರ್ಗಳ ಲೈಸೆನ್ಸ್ ರದ್ದುಗೊಳಿಸಿ, 2 ವರ್ಷಗಳವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗುವುದು.