ನವದೆಹಲಿ, ಸೆ.29 (DaijiworldNews/AK): ನಾನು ಯಾವುದೇ ಬ್ಲ್ಯಾಕ್ಮೇಲ್ಗೆ ಹೆದರುವ ಜಾಯಮಾನದವನಲ್ಲ. ನನ್ನ ಬಳಿ ಆಸ್ತಿ ಇದೆ, ಯಾಕೆ ಇರಬಾರದು? ನನ್ನ ಆಸ್ತಿ ಬಗ್ಗೆ ಕೇಳಲು ಅವರೇನು ಆದಾಯ ತೆರಿಗೆ ಅಧಿಕಾರಿಯೇ ಎಂದು ಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ನೈಸ್ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ನೈಸ್ ಯೋಜನೆಗೆ ಕುಮಾರಸ್ವಾಮಿ ಅವರ ತಂದೆ ಹೆಚ್.ಡಿ. ದೇವೇಗೌಡರೇ ಸಹಿ ಹಾಕಿದ್ದು, ಸ್ವತಃ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಹಲವು ಬೇನಾಮಿ ಹಗರಣಗಳು ನಡೆದಿವೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ತೀವ್ರ ಒತ್ತಡ ಇರುವುದರಿಂದ ಕುಮಾರಸ್ವಾಮಿ ಬಹಳ ಹತಾಶರಾಗಿದ್ದಾರೆ. ಇಷ್ಟು ದಿನ ಯಾಕೆ ಸುಮ್ಮನಿದ್ದರು? ನೈಸ್ ಜೊತೆಗಿನ ಇವರ ವ್ಯವಹಾರ ಕೆಟ್ಟುಹೋಗಿದ್ದಕ್ಕೆ ಈಗ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನ್ನ ಹಾಗೂ ನನ್ನ ಕುಟುಂಬದ ಆಸ್ತಿ ಗಳಿಕೆಯನ್ನು ಸಮರ್ಥಿಸಿಕೊಂಡ ಸಿಎಂ, ನನ್ನ ಮಕ್ಕಳು ಕಾನೂನು ವ್ಯಾಪ್ತಿಯಲ್ಲೇ ಆಸ್ತಿ ಖರೀದಿ ಮಾಡಿದ್ದಾರೆ. ಅವರಿಗೆ ಸಾಮರ್ಥ್ಯವಿದ್ದರೆ ಇನ್ನೂ ಖರೀದಿ ಮಾಡುತ್ತಾರೆ. ನಾನು ಲಂಚ ಪಡೆದಿಲ್ಲ, ವ್ಯಾಪಾರ-ವ್ಯವಹಾರ ಮಾಡುವ ಶಕ್ತಿ ನನಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಎಲ್ಲವನ್ನೂ ಅಧಿಕೃತವಾಗಿ ಘೋಷಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.