ಶ್ರೀನಗರ, ಸೆ.30 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾದ ಉನ್ನತ ಭಯೋತ್ಪಾದಕನೊಬ್ಬನನ್ನು ಹತ್ಯೆ ಮಾಡಲಾಗಿದೆ.

ಸಾವನ್ನಪ್ಪಿದ ಭಯೋತ್ಪಾದಕನನ್ನು ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಫೌಜಿ ಮೂಸಾ ಎಂದು ಗುರುತಿಸಲಾಗಿದೆ.
'ಆಪರೇಷನ್ ಕೊರಾಗ್ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ಸೇನೆ, ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಜಂಟಿಯಾಗಿ ಬುಡ್ಗಾಮ್ನ ಯೂಸ್ಮಾರ್ಗ್ ಬಳಿಯ ಕೊರಾಗ್ನಲ್ಲಿ ನಡೆಸಿದೆ' ಎಂದು ಎಕ್ಸ್ ನಲ್ಲಿ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಪೋಸ್ಟ್ ಮಾಡಿದೆ.
ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಕೊರಾಗ್ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದವು. ಈ ವೇಳೆ ಅನುಮಾನಾಸ್ಪದ ಚಲನವಲನ ಗಮನಕ್ಕೆ ಬಂದಿದ್ದು, ಪಡೆಗಳು ಸವಾಲು ಹಾಕಿದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ತಿಳಿಸಿದೆ.
ಹತ್ಯೆಯಾದ ಉಗ್ರನನ್ನು ಅಧಿಕಾರಿಗಳು ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಎಂದು ಗುರುತಿಸಿದ್ದಾರೆ. ಜಮ್ಮು-ಕಾಶ್ಮೀರದ ಹಲವು ದಾಳಿಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮೂಸಾ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.