ಅಹಮದಾಬಾದ್,ಸೆ.30 (DaijiworldNews/AK): ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಎಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ ಇರಾನಿನ ದೋಣಿಯಿಂದ 526 ಕೆಜಿಗೂ ಹೆಚ್ಚು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡ ಹೆರಾಯಿನ್ ಮತ್ತು ಮೆಥಾಂಫೆಟಮೈನ್ನ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 3,000 ಕೋಟಿಗೂ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಗುಪ್ತಚರ ಮಾಹಿತಿ ಆಧರಿಸಿ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ಅನುಮಾನಾಸ್ಪದ ದೋಣಿಯ ಮೇಲೆ ನಿರಂತರ ನಿಗಾ ಇರಿಸಿತ್ತು. ಬಳಿಕ ಬೆನ್ನಟ್ಟಿ ದೋಣಿಯನ್ನು ತಡೆದು, ಸಿಬ್ಬಂದಿ ಬೋರ್ಡಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ಬಳಿಕ ವಶಪಡಿಸಿಕೊಂಡ ಮಾದಕವಸ್ತುಗಳು, ದೋಣಿ ಮತ್ತು ಅದರಲ್ಲಿದ್ದ ಸಿಬ್ಬಂದಿಯನ್ನು ಸಶಸ್ತ್ರ ಭದ್ರತೆಯೊಂದಿಗೆ ಮುಂಬೈಗೆ ಕರೆತರಲಾಗಿದೆ. ಇಲ್ಲಿ ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸಲಿವೆ.