ಬೆಂಗಳೂರು, ಸೆ.30 (DaijiworldNews/AK): ಬಿ.ಕೆ.ಹರಿಪ್ರಸಾದ್ ಅವರ ಬ್ಯಾನರ್ ಹರಿದು ಹಾಕುವ ಕೀಳುಮಟ್ಟದ ರಾಜಕಾರಣದ ಅವಶ್ಯಕತೆ ನಮಗಿಲ್ಲ. ನಮಗೆ ಅಂಥ 420 ರಾಜಕಾರಣದ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಹರಿಪ್ರಸಾದ್ ಅವರೇ ಕಾರ್ಯಕರ್ತರಿಗೆ ತಿಳಿಸಿ, ಬ್ಯಾನರ್ ಹರಿದು ಹಾಕಿಸಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಅಂಥ 420 ರಾಜಕಾರಣದ ಅವಶ್ಯಕತೆ ಇಲ್ಲ ಎಂದರು.
ನಾನು ಎಲ್ಕೆಜಿಯಲ್ಲಿ ಇರಬಹುದು; ಮೊದಲ ಬಾರಿಗೆ ಶಾಸಕ ಇರಬಹುದು. ಬಿ.ಕೆ.ಹರಿಪ್ರಸಾದ್ ಅವರು ಡಾಕ್ಟರ್ ಆದರೂ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ ಎಂದರು.
ನಾವು ಈಚೆಗೆ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಮಾಡಿದ್ದೆವು. ನಮ್ಮ ಹೋರಾಟದ ಯಶಸ್ಸಿನಿಂದ ಪ್ರೇರಣೆ ಪಡೆದ ಕೆಪಿಸಿಸಿ ಅಧ್ಯಕ್ಷರು ಸ್ವತಃ ನನ್ನ ಕ್ಷೇತ್ರದಲ್ಲಿ, ಮಾನ್ಯ ಯಡಿಯೂರಪ್ಪ ಅವರಿಗೆ ರಾಜಕೀಯ ಜನ್ಮ ಕೊಟ್ಟಂಥ ನಮ್ಮ ಹೆಮ್ಮೆಯ ಶಿಕಾರಿಪುರ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಹೋರಾಟದ ಕಿಚ್ಚನ್ನು ಹಚ್ಚಿನ ಕೀರ್ತಿ ನಮ್ಮ ಶಿಕಾರಿಪುರ ಕ್ಷೇತ್ರಕ್ಕೆ ಸೇರುತ್ತದೆ ಎಂದು ತಿಳಿಸಿದರು. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು
ತಾವು ಲಂಚ ಪಡೆದವರು ಎಂಬ ಆರೋಪಕ್ಕೆ ಉತ್ತರ ನೀಡಿದ ವಿಜಯೇಂದ್ರ ಅವರು, ಹರಿಪ್ರಸಾದ್ ಅವರು ನಾಲಿಗೆ ಬಿಗಿಹಿಡಿದು ಮಾತನಾಡಲಿ ಈಗಾಗಲೇ ಇವೆಲ್ಲವೂ ಕೋರ್ಟಿನಲ್ಲಿ ಇತ್ಯರ್ಥ ಆಗಿದೆ. ಯಡಿಯೂರಪ್ಪ, ಅವರ ಕುಟುಂಬ ನಿರಪರಾಧಿಗಳೆಂದು ಯುಪಿಎ ಸರಕಾರ ಇದ್ದಾಗ ತನಿಖೆ ನಡೆದು ಗೊತ್ತಾಗಿದೆ ಎಂದರು.
ಹತಾಶರಾಗಿರುವ ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್ ಅವರು ಹತಾಶರಾಗಿದ್ದಾರೆ. ಒಂದು ಕಡೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು 100 ದಿನಗಳ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷರನ್ನು ಕರೆಯದೇ ಬಹಿಷ್ಕರಿಸಿದ್ದಾರೆ. ಹಾಗಾಗಿ ಹತಾಶರಾಗಿ ಪರ್ಯಾಯ ಪಾದಯಾತ್ರೆ ಮಾಡುತ್ತಿದ್ದಾರೆ. ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ನುಡಿದರು.