ನವದೆಹಲಿ, ಸೆ.30 (DaijiworldNews/AK): ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರಂ 6ರ ಹೆಚ್ಚುವರಿ ಎಸ್ಐಆರ್ ಘೋಷಣಾಪತ್ರವನ್ನು ಹಿಂಪಡೆದಿದೆ.

ಈ ಕ್ರಮವು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ರಾಜ್ಯಗಳಲ್ಲಿ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಗಣನೀಯವಾಗಿ ಸರಳಗೊಳಿಸಲಿದೆ. ವಿವಾದಕ್ಕೆ ಕಾರಣವಾಗಿದ್ದ ಈ ಷರತ್ತಿನ ರದ್ದತಿಯು ಸಾರ್ವಜನಿಕರ ಹಾಗೂ ಇತರೆ ಚುನಾವಣಾ ಆಯುಕ್ತರ ಆಕ್ಷೇಪಗಳಿಗೆ ಚುನಾವಣಾ ಆಯೋಗದ ಪ್ರತಿಕ್ರಿಯೆಯಾಗಿದೆ.
ಫಾರಂ 6 ಎನ್ನುವುದು ಭಾರತೀಯ ಚುನಾವಣಾ ಆಯೋಗವು ನಿರ್ದಿಷ್ಟಪಡಿಸಿದ ಅಧಿಕೃತ ಅರ್ಜಿಯಾಗಿದೆ. 18 ವರ್ಷ ತುಂಬಿದ ಅಥವಾ ತುಂಬುತ್ತಿರುವ ಯಾವುದೇ ಅರ್ಹ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಈ ನಮೂನೆಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಈ ಅರ್ಜಿಯ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಆದರೆ, ಈಸಿಐ ನೆಟ್ ವೆಬ್ಸೈಟ್ನಲ್ಲಿ ಲಭ್ಯವಿದ್ದ ಆನ್ಲೈನ್ ಫಾರಂ 6ನಲ್ಲಿ ಚುನಾವಣಾ ಆಯೋಗವು ಹೊಸದೊಂದು ಘೋಷಣಾ ವಿಭಾಗವನ್ನು ಸೇರಿಸಿತ್ತು.
ಈ ವಿಭಾಗದ ಅನ್ವಯ, ಹೊಸದಾಗಿ ನೋಂದಾಯಿಸಿಕೊಳ್ಳುವ ಯುವ ಮತದಾರರು ತಮ್ಮ ಪೋಷಕರು ಅಥವಾ ಅಜ್ಜ ಅಜ್ಜಿಯಂದಿರ ಹೆಸರುಗಳು ಹಿಂದಿನ ಕರಡು ಮತದಾರರ ಪಟ್ಟಿಯಲ್ಲಿ ಸೇರಿಕೊಂಡಿವೆಯೇ ಇಲ್ಲವೇ ಎಂಬುದರ ಬಗ್ಗೆ ವಿವರಗಳನ್ನು ನೀಡಬೇಕಾಗಿತ್ತು. ಈ ಪ್ರಶ್ನೆಯು ಕಡ್ಡಾಯವಲ್ಲ ಎಂದು ನಮೂದಿಸಿದ್ದರೂ, ಆನ್ಲೈನ್ನಲ್ಲಿ ಆ ಪ್ರಶ್ನೆಗೆ ಉತ್ತರ ನೀಡದೆ ಇದ್ದರೆ ಅರ್ಜಿ ಪ್ರಕ್ರಿಯೆಯು ಮುಂದಕ್ಕೆ ಸಾಗುತ್ತಿರಲಿಲ್ಲ. ವಾಸ್ತವವಾಗಿ ಇದು ಕಡ್ಡಾಯದ ಸ್ವರೂಪ ಪಡೆದುಕೊಂಡಿತ್ತು. ಇದರಿಂದಾಗಿ ಅನೇಕ ಹೊಸ ಮತದಾರರು ನೋಂದಣಿ ಪ್ರಕ್ರಿಯೆಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿತ್ತು, ಅಸಮಾಧಾನ ವ್ಯಕ್ತಪಡಿಸಿದ್ದರು.