ನವದೆಹಲಿ, ಅ.01 (DaijiworldNews/TA): ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಕಾಕ್ಪಿಟ್ ಘಟನೆಯ ವೇಳೆ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದರೂ ಇತರ ಪ್ರಯಾಣಿಕರ ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಚ್ಚರ್ ತೋರಿದ ಧೈರ್ಯ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರ ಸಮಯೋಚಿತ ಕ್ರಮಗಳು ದೊಡ್ಡ ಅನಾಹುತವನ್ನು ತಪ್ಪಿಸಲು ನೆರವಾದವು ಎಂದು ಮೋದಿ ತಿಳಿಸಿದ್ದಾರೆ. ಮಚ್ಚರ್ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈಯ FZ1073 ವಿಮಾನದಲ್ಲಿ ಹಾರಾಟದ ವೇಳೆ ಕಾಕ್ಪಿಟ್ನಲ್ಲಿ ಗಂಭೀರ ಘಟನೆ ಸಂಭವಿಸಿತ್ತು. ಬೋಯಿಂಗ್ 737 MAX 8 ವಿಮಾನವು ತೀವ್ರವಾಗಿ ಎತ್ತರ ಕಳೆದುಕೊಂಡ ಬಳಿಕ ತುರ್ತು ಸಂಕೇತಗಳನ್ನು ರವಾನಿಸಿ, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದತ್ತ ತಿರುಗಿತ್ತು. ಘಟನೆಯ ಸಂದರ್ಭದಲ್ಲಿ ಪೈಲಟ್ಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿರುವುದನ್ನು ಫ್ಲೈದುಬೈ ದೃಢಪಡಿಸಿದೆ. ಗಾಯಗೊಂಡ ಕ್ಯಾಪ್ಟನ್ ಸೇರಿದಂತೆ ಇಬ್ಬರು ಪೈಲಟ್ಗಳನ್ನು ತಬೂಕ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿದ್ದ ಇತರ ಪೈಲಟ್ಗಳು ಹಾಗೂ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕೆಲವು ವರದಿಗಳ ಪ್ರಕಾರ, ಸಹ-ಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದ್ದು, ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇತರ ಪೈಲಟ್ಗಳು ಕಾಕ್ಪಿಟ್ಗೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ನೆರವಾದರು. ಆದರೆ ಘಟನೆಯ ನಿಖರ ಕಾರಣ ಮತ್ತು ಉದ್ದೇಶದ ಕುರಿತು ತನಿಖೆ ಮುಂದುವರಿದಿದೆ. ಘಟನೆಯ ವೇಳೆ ವಿಮಾನವು ಮೊದಲು 7700 ತುರ್ತು ಸಂಕೇತವನ್ನು ಕಳುಹಿಸಿತ್ತು. ಬಳಿಕ 7500 ಸಂಕೇತಕ್ಕೆ ಬದಲಾಗಿತ್ತು. 7500 ಸಂಕೇತವನ್ನು ವಿಮಾನದಲ್ಲಿ ಅಕ್ರಮ ಹಸ್ತಕ್ಷೇಪ ಅಥವಾ ಅಪಹರಣದಂತಹ ಪರಿಸ್ಥಿತಿಗಳನ್ನು ಸೂಚಿಸಲು ಬಳಸಲಾಗುತ್ತದೆ. ಆದಾಗ್ಯೂ, ಈ ಸಂಕೇತವೊಂದೇ ಘಟನೆಯ ಸ್ವರೂಪವನ್ನು ಅಂತಿಮವಾಗಿ ದೃಢಪಡಿಸುವುದಿಲ್ಲ ಎಂದು ವರದಿಗಳು ಸೂಚಿಸಿವೆ. ವಿಮಾನವು ತೀವ್ರವಾಗಿ ಎತ್ತರ ಕಳೆದುಕೊಂಡ ಬಳಿಕ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ತಿಳಿಸಿದೆ. ಘಟನೆಯ ಹಿನ್ನೆಲೆ ಮತ್ತು ಉದ್ದೇಶದ ಕುರಿತು ಅಧಿಕೃತ ತನಿಖೆ ನಡೆಯುತ್ತಿದೆ.