ಬಂಗಾರಪೇಟೆ,ಅ.01 (DaijiworldNews/ AK): ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಮತ್ತು ಸರಕಾರಕ್ಕೆ ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ರೈತರ ಬಗ್ಗೆ ಬರುತ್ತಿಲ್ಲ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಇತ್ತೀಚೆಗೆ ನಾವು ಬಳ್ಳಾರಿ ಚಲೋ 10 ದಿನಗಳ ಪಾದಯಾತ್ರೆ ಮಾಡಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವಂತ ಕೆಲಸವನ್ನು ಕೂಡ ಮಾಡಿದ್ದೇವೆ. ನಮ್ಮ ಹೋರಾಟದ ಪರಿಣಾಮ ವಿಶೇಷ ಅಧಿವೇಶನವನ್ನು ಕೂಡ ಕರೆದಿದ್ದರು. ಇಂತಹ ಭೀಕರ ಬರಗಾಲದ ಸಂದರ್ಭದಲ್ಲಿ ಪ್ರತಿ ಹೆಕ್ಟೇರ್ ಗೆ 50,000 ರೂಪಾಯಿ ಪರಿಹಾರವನ್ನ ಕೊಡಬೇಕು, 5 ಲಕ್ಷ ರೂಪಾಯಿ ವರೆಗೆ ಕೃಷಿ ಸಾಲ ಮನ್ನಾ ಮಾಡಬೇಕು, ಮತ್ತೆ ರೈತರಿಗೆ ಮೂರು ಫೇಸ್ ವಿದ್ಯುತ್ ಏಳು ತಾಸುಗಳ ಕಾಲ ಕೊಡಬೇಕು; ಎಂದು ಬಲವಾಗಿ ನಾವು ಪ್ರತಿಪಾದನೆ ಮಾಡಿದ್ದೆವು ಎಂದು ತಿಳಿಸಿದರು.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ, ಅನೇಕ ಸಂದರ್ಭದಲ್ಲಿ ಯಾವ ರೀತಿ ಪರಿಹಾರವನ್ನು ಕೊಟ್ಟರೋ ಅದನ್ನು ಗಮನಿಸಬೇಕು. ಬಡವರು ಮನೆ ಕಳೆದುಕೊಂಡರೆ, ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್. ನಿಯಮ ಪ್ರಕಾರ 1.5 ಲಕ್ಷ ರೂಪಾಯಿ ಕೊಡಬೇಕಾಗಿತ್ತು. ಆದರೆ ಅಂದಿನ ಮುಖ್ಯಮಂತ್ರಿಗಳು ಯಡಿಯೂರಪ್ಪನವರು 5 ಲಕ್ಷ ರೂಪಾಯಿ ಕೊಡುವ ಕ್ರಾಂತಿಕಾರಿ ನಿರ್ಧಾರವನ್ನು ಅಂದಿನ ಬಿಜೆಪಿ ಸರ್ಕಾರದಲ್ಲಿ ಮಾಡಿದ್ದರು ಎಂದು ಗಮನ ಸೆಳೆದರು.
ರೈತಪರ ಯೋಜನೆ ನೀಡಿದ ಬಿಜೆಪಿ, ಯಡಿಯೂರಪ್ಪ
ರೈತರಿಗೆ ಅನುಕೂಲ ಆಗುವಂಥ ಅನೇಕ ಯೋಜನೆಗಳನ್ನು ಕೊಟ್ಟರು. ಆದರೆ ಇವತ್ತು ಇಂತಹ ಬರಗಾಲದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿ, ಪ್ರತಿ ಹೆಕ್ಟೇರ್ ಗೆ 50,000 ರೂಪಾಯಿ ಪರಿಹಾರ ಕೊಡಿ ಅಂತ ಹೇಳಿದೆವು. ಮೊನ್ನೆ ಅಧಿವೇಶನ ಕರೆದು ಭಿಕ್ಷುಕರಿಗೆ ಕೊಟ್ಟಂತೆ 2500 ರೂಪಾಯಿ ಘೋಷಣೆ ಮಾಡಿದ್ದಾರೆ, ಇನ್ನು ಕೂಡ ಅದನ್ನು ಕೊಟ್ಟಿಲ್ಲ. ಕೇವಲ ಘೋಷಣೆಯನ್ನು ಮಾಡಿದ್ದಾರೆ ಎಂದು ಟೀಕಿಸಿದರು.