ಮುಂಬೈ, ಅ.01 (DaijiworldNews/AK): ಮಹಾರಾಷ್ಟ್ರದ ದಿವ್ಯಾಗರ್ ಬೀಚ್ಗೆ ಪ್ರವಾಸಕ್ಕೆ ತೆರಳಿದ್ದ ಪುಣೆಯ 8 ವಿದ್ಯಾರ್ಥಿಗಳು ಸಮುದ್ರದ ಪಾಲಾಗಿದ್ದಾರೆ.

ತನ್ಮಯ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೇ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಸಂಕರ್, ರಾಜ್ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಂ ಭಂಡವಾಳ್ಕರ್ ಮತ್ತು ಕೌಸ್ತುಭ್ ಸಂದೀಪ್ ದೌಂಡ್ ಮೃತರು ಎಂದು ತಿಳಿದು ಬಂದಿದೆ. 48 ಜನ ಬೀಚ್ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನೀರಲ್ಲಿ ಆಟ ಆಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.
ಮೃತರೆಲ್ಲರೂ 16 ವರ್ಷ ವಯಸ್ಸಿನವರಾಗಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ಪುಣೆ ಜಿಲ್ಲೆಯ ಅಲಂದಿಯಲ್ಲಿರುವ ‘ವಿನ್ನರ್ಸ್ ಅಕಾಡೆಮಿ’ ಎಂಬ ಖಾಸಗಿ ತರಬೇತಿ ಕೇಂದ್ರದವರಾಗಿದ್ದಾರೆ ಎಂದು ತಿಳಿದುಬಂದಿದೆ. 25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಜನರು ಈ ತಂಡದಲ್ಲಿದ್ದರು.
ವಿದ್ಯಾರ್ಥಿಗಳು ನೀರಿನ ಆಳ ಮತ್ತು ಅಲೆಗಳ ವೇಗವನ್ನು ಅಂದಾಜಿಸದೆ ಸಮುದ್ರಕ್ಕೆ ಇಳಿದಿದ್ದು, ಈ ದುರಂತಕ್ಕೆ ಕಾರಣ ಎನ್ನಲಾಗಿದೆ.