ಬೆಂಗಳೂರು, ಅ.12 (DaijiworldNews/AK): ಕಾಂಗ್ರೆಸ್ಸಿನ ನಾಯಕರು ಅವರ ಪಕ್ಷದವರ ಸ್ಟಿಂಗ್ ಆಪರೇಷನ್ ಮಾಡಿ, ಕಾಂಗ್ರೆಸ್ ಅನ್ನೇ ಮುಗಿಸುವ ಕೆಲಸವನ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಇರಲಿ; ಬೇರೆ ಯಾರೇ ಇರಲಿ. ಆರೋಪ ಮಾಡಿದ ಮೇಲೆ ಬದ್ಧತೆ ಇರಬೇಕು. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಅನುಮಾನ ಯಾರ ಮೇಲೆ ಬರುತ್ತದೆ ಎಂದು ಕೇಳಿದರು.
ಸಿದ್ದರಾಮಯ್ಯನವರು ತನಿಖೆ ಕೋರಿ ಮುಖ್ಯಮಂತ್ರಿಗಳಿಗೆ ಅಥವಾ ಜಿಲ್ಲಾಧಿಕಾರಿಗೆ ಪತ್ರ ಬರೆಯಲಿ. ನೀವು ಸಿಬಿಐ ತನಿಖೆ ನಂಬದೇ ಇದ್ದರೆ ಯಾವುದಾದರೂ ಮಾಡಿಸಿ. ಅಥವಾ ನಿಮಗೆ ನಿಜವಾದ ಸತ್ಯ ಬರಲೇಬೇಕು ಅನ್ನೋದಾದ್ರೆ ಸಿಬಿಐಗೆ ಕೊಡಿ, ಸತ್ಯ ಹೊರಗಡೆ ಬರಲಿ ಎಂದು ಒತ್ತಾಯಿಸಿದರು.
ಸತ್ಯ ಹೊರಕ್ಕೆ ಬರಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶವೇ ಎಂದು ಕೇಳಿದರು. ಒಟ್ಟಾರೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದವರನ್ನು ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂದು ದೂರಿದರು.
ರಾಹುಲ್, ಸೋನಿಯಾ, ಖರ್ಗೆ ಹೆಸರು ಬಿಟ್ಟು ಹೋಗಿದೆಯೇ?
ಎಸ್ಐಆರ್ ವಿಚಾರವನ್ನು ಇವರೇ ಮೈಮೇಲೆ ಹಾಕಿಕೊಂಡಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಏನಾದರೂ ಎಸ್ಐಆರ್ ನಲ್ಲಿ ಕೈಬಿಟ್ಟಿದೆಯಾ? ಸೋನಿಯಾ ಗಾಂಧಿಯವರ ಹೆಸರನ್ನು ಕೈಬಿಟ್ಟಿದೆಯಾ? ಖರ್ಗೆಯವರದ್ದು ಕೈಬಿಟ್ಟಿದೆಯಾ? ಡಿ.ಕೆ. ಶಿವಕುಮಾರ್ ಅವರದ್ದು ಕೈಬಿಟ್ಟಿದೆಯಾ? ಎಂದು ಅವರು ಪ್ರಶ್ನಿಸಿದರು.
ಯಾರ ಹೆಸರು ತೆಗೆದಿದೆ. ತೆಗೆದುಕೊಂಡು ಬನ್ನಿ. ಅವನ್ನು ಸೇರಿಸಲು ಚುನಾವಣಾ ಆಯೋಗವನ್ನು ಭೇಟಿ ಮಾಡೋಣ ಎಂದು ಸವಾಲು ಹಾಕಿದರು. ಬೆಂಕಿಯೇ ಇಲ್ಲ; ನೀವೇ ಹೊಗೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು.