ಬೆಂಗಳೂರು, ಅ.12 (DaijiworldNews/AA): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಒಂದಾದ ಮೇಲೊಂದರಂತೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ತೈಲ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡು ಇತ್ತೀಚೆಗಷ್ಟೇ ಡೀಸೆಲ್ ಅಭಾವದಿಂದ ಬಸ್ಗಳು ಸ್ಥಗಿತಗೊಂಡಿದ್ದ ಘಟನೆ ಬೆನ್ನಲ್ಲೇ, ಇದೀಗ ಟಿಕೆಟ್ ಪೇಪರ್ ರೋಲ್ ತೀವ್ರ ಅಭಾವ ಎದುರಾಗಿದೆ.

ಡೀಸೆಲ್ ಅಭಾವದ ಬೆನ್ನಲ್ಲೇ ಇದೀಗ ಟಿಕೆಟ್ ಪೇಪರ್ ರೋಲ್ಗಳ ಅಭಾವ ಎದುರಾಗಿದೆ. ಇಟಿಎಂ ಯಂತ್ರಗಳಲ್ಲಿ ಬಳಸುವ ಪೇಪರ್ ರೋಲ್ಸ್ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ, ಒಟ್ಟಿಗೆ ಪ್ರಯಾಣಿಸುವ ಮೂರ್ನಾಲ್ಕು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಿ ಪೇಪರ್ ರೋಲ್ ಉಳಿಸಲು ಕಂಡಕ್ಟರ್ಗಳು ಕಷ್ಟಪಡುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್-ಕಲಬುರಗಿ ಸೇರಿದಂತೆ ಪ್ರಮುಖ ಮಾರ್ಗಗಳ ಬಸ್ಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕಾಗದದ ಕೊರತೆ ನೀಗಿಸಲು ಕೆಲವೆಡೆ ಕಂಡಕ್ಟರ್ಗಳು ಸಹೋದ್ಯೋಗಿ ಕಂಡಕ್ಟರ್ಗಳಿಂದ ಪೇಪರ್ ರೋಲ್ಗಳನ್ನು ಸಾಲವಾಗಿ ಪಡೆದು ಬಸ್ ಕಾರ್ಯಾಚರಣೆ ನಡೆಸುವ ಪರಿಸ್ಥಿತಿ ಎದುರಾಗಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ನಂತರ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ಸರ್ಕಾರದಿಂದ ಸಿಗಬೇಕಾದ ಸಬ್ಸಿಡಿ ಮತ್ತು ಮರುಪಾವತಿ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗದ ಕಾರಣ ಸಾರಿಗೆ ಸಂಸ್ಥೆಗಳು ತೀವ್ರ ಹಣಕಾಸಿನ ಅಭಾವ ಎದುರಿಸುವಂತಾಗಿದೆ.
ತೈಲ ಕಂಪನಿಗಳಿಗೆ ಸಾರಿಗೆ ಇಲಾಖೆಯು 170 ಕೋಟಿ ರೂ.ಗೂ ಅಧಿಕ ಬಾಕಿ ಪಾವತಿಸದ ಕಾರಣ ಕೆಲವೇ ದಿನಗಳ ಹಿಂದೆ ಡೀಸೆಲ್ ಪೂರೈಕೆ ಸ್ಥಗಿತಗೊಂಡು, ನೂರಾರು ಬಸ್ ಟ್ರಿಪ್ಗಳು ರದ್ದಾಗಿದ್ದವು. ಈಗ ಟಿಕೆಟ್ ಪೇಪರ್ ನೀಡುವ ಏಜೆನ್ಸಿಗಳಿಗೂ ಸಾರಿಗೆ ಇಲಾಖೆ ಕೋಟ್ಯಂತರ ರೂ. ಪಾವತಿಸಬೇಕಿದ್ದು, ಅವರು ಸರಬರಾಜು ತಡೆಡಿದಿದ್ದಾರೆ.