ನವದೆಹಲಿ, ಅ.13 (DaijiworldNews/AA): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್ ಮಾಡಿರುವ ಪೋಸ್ಟ್ ಇದೀಗ ಭಾರೀ ವಿವಾದ ಸೃಷ್ಟಿಸಿದೆ.

ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಸೋಮವಾರ ಪೋಸ್ಟ್ ಹಂಚಿಕೊಂಡಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ನ ಕೇರಳ ಘಟಕ ಹಂಚಿಕೊಂಡಿರುವ ಈ ಪೋಸ್ಟ್ ನಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಾನೂನು-ಸುವ್ಯವಸ್ಥೆ ನಿಭಾಯಿಸಲು ಸಾಧ್ಯವಾಗದಿದ್ದರೆ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿತ್ತು.
ವಕೀಲರ ಸಮುದಾಯ ಹಾಗೂ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕಾಂಗ್ರೆಸ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಇದರ ಬೆನ್ನಲ್ಲೇ ಪಕ್ಷದ ನಾಯಕರ ಅನುಮತಿ ಅಥವಾ ಗಮನಕ್ಕೆ ಬಾರದೆ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದಕ್ಕೆ ಕಾರಣರಾದ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
"ಡಿಯರ್ ಸೂರ್ಯ ಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ" ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.