ನವದೆಹಲಿ, ಅ.13 (DaijiworldNews/AA): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಇಂಡಿ ಮೈತ್ರಿಕೂಟ ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ 14 ದೋಷಗಳು ಇವೆ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ತಿಳಿಸಿದೆ.

ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಒಟ್ಟು 14 ತಾಂತ್ರಿಕ ದೋಷಗಳನ್ನು ಪಟ್ಟಿ ಮಾಡಿದ್ದು, ಕೋರ್ಟ್ ಶುಲ್ಕದಲ್ಲಿ 220ರೂ. ಶುಲ್ಕ ಬಾಕಿ ಇದೆ. ಎಸ್ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಅಕ್ರಮಗಳನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಅರ್ಜಿಯಲ್ಲಿ ತಾಂತ್ರಿಕ ಲೋಪಗಳಿರುವುದರಿಂದ ಇವುಗಳನ್ನು ಸರಿಪಡಿಸುವವರೆಗೆ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ರಿಜಿಸ್ಟ್ರಿ ತಿಳಿಸಿದೆ.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ಅಖಿಲೇಶ್ ಯಾದವ್, ತೇಜಸ್ವಿ ಪ್ರಸಾದ್ ಯಾದವ್, ಸುಳೆ, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್, ಡಿ. ರಾಜಾ, ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಾಜಿ, ಎಂ.ಎ. ಬೇಬಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇ.ಟಿ. ಮೊಹಮ್ಮದ್ ಬಶೀರ್ ಈ ಅರ್ಜಿ ಸಲ್ಲಿಸಿದ್ದಾರೆ.