ನವದೆಹಲಿ, ಅ.13 (DaijiworldNews/AA): ಶಕ್ತಿ ಎಂಬುದು ಮುಂದೆ ಚಲಿಸುವ ಸಾಮರ್ಥ್ಯ ನೀಡುವುದು ಮಾತ್ರವಲ್ಲ, ಇತರರಿಗೂ ಮುಂದೆ ಚಲಿಸುವ ಸಾಮರ್ಥ್ಯ ಕೊಡುತ್ತದೆ. ಸಬಲೀಕರಣಕ್ಕೆ ಶಕ್ತಿ ಇರಬೇಕೆನ್ನುವುದು ಭಾರತದ ಚಿಂತನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಬ್ಲೂಮ್ಬರ್ಗ್ ಎಕನಾಮಿ ಫೋರಂ 2026 ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, "ಈ ಬಾರಿಯ ಫೋರಂನಲ್ಲಿ ಉದಯೋನ್ಮುಖ ಶಕ್ತಿಗಳ ಥೀಮ್ ಇದೆ. 21ನೇ ಶತಮಾನದಲ್ಲಿ ದೊಡ್ಡ ಬದಲಾವಣೆ ಆಗುತ್ತಿದೆ. ಇವತ್ತು ತಂತ್ರಜ್ಞಾನ, ಡಾಟಾ, ಜ್ಞಾನ, ನಾವೀನ್ಯತೆಯೇ ಶಕ್ತಿಯಾಗಿದೆ. ತಂತ್ರಜ್ಞಾನವು ಕೆಲವರಿಗೆ ಮಾತ್ರ ನೆರವಾಗುತ್ತದಾ, ಅಥವಾ ಲಕ್ಷಾಂತರ ಮಂದಿಯನ್ನು ಸಬಲೀಕರಣಗೊಳಿಸುತ್ತದಾ ಎಂಬುದು ಪ್ರಶ್ನೆ. ಶಕ್ತಿ ಯಾರು ಹೊಂದಿದ್ದಾರೆ ಎಂಬುದಲ್ಲ, ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದು ಪ್ರಶ್ನೆ" ಎಂದರು.
"ಭಾರತ ಪ್ರಜಾತಂತ್ರದ ತಾಯಿಯಾಗಿದೆ. ಇಲ್ಲಿ ಎಲ್ಲವನ್ನೂ, ಎಲ್ಲರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ. ಸಮಸ್ಯೆಗಳ ಬಗ್ಗೆ ಪ್ರಜಾತಾಂತ್ರಿಕವಾಗಿ ಚರ್ಚಿಸುತ್ತೇವೆ. ಇಲ್ಲಿ ನೂರಕ್ಕೂ ಭಾಷೆಗಳಿವೆ. 80,000 ನೊಂದಾಯಿತ ದಿನಪತ್ರಿಕೆಗಳು, ಮುದ್ರಣ ಸಂಸ್ಥೆಗಳಿವೆ. 500 ಮಿಲಿಯನ್ ಯೂಟ್ಯೂಬ್ ಬಳಕೆದಾರರು, 500 ಮಿಲಿಯನ್ಗೂ ಅಧಿಕ ಇನ್ಸ್ಟಾಗ್ರಾಮ್ ಬಳಕೆದಾರರು ಇದ್ದಾರೆ. ಡಿಜಿಟಲ್ ಪವರ್ನಿಂದಾಗಿ ಜನರು ಪರಸ್ಪರ ಸಂಪರ್ಕಿಸಿ, ಚರ್ಚಿಸಲು ಸಾಧ್ಯವಾಗಿದೆ" ಎಂದು ಹೇಳಿದರು.
ಪ್ರತಿಯೊಬ್ಬರಿಗೂ ನೆರವಾಗುವ ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್, ಬಿಗ್ ಕ್ಯಾಟ್ ಅಲಾಯನ್ಸ್, ಬಯೋಫೂಯೆಲ್ ಅಲಾಯನ್ಸ್, ಮಿಷನ್ ಲೈಫ್, ಐಮೆಕ್ (ಇಂಡಿಯ-ಮಿಡಲ್ಈಸ್ಟ್-ಯೂರೋಪ್ ಕಾರಿಡಾರ್) ಪ್ಲಾಟ್ಫಾರ್ಮ್ಗಳನ್ನು ಭಾರತ ರೂಪಿಸಿದೆ. ಒಂದು ಸೂರ್ಯ, ಒಂದು ವಿಶ್ವ ಮತ್ತು ಒಂದು ಗ್ರಿಡ್ ಇದು ಭಾರತದ ಆಶಯ. ಒಂದು ಕುಟುಂಬ ಮತ್ತು ಒಂದು ಭವಿಷ್ಯ ಇದು ಭಾರತದ ಗುರಿ. ಜಗತ್ತಿಗೆ ಸಂಪರ್ಕ ಕೊಡುವುದು ಮತ್ತು ಇತರರನ್ನು ಸಬಲೀಕರಣಗೊಳಿಸುವುದು ಭಾರತದ ಆದ್ಯತೆ" ಎಂದು ವಿವರಿಸಿದರು.