ಮಧುರೈ, ಅ.13 (DaijiworldNews/TA): ದೀಪಾವಳಿಗೆ ಸಿಹಿತಿಂಡಿ ತಿನ್ನುವ ಆಸೆಯಿಂದ ಫಾಲೋವರ್ಸ್ಗೆ ತನ್ನ ವಿಳಾಸ ಹಂಚಿಕೊಂಡ ತಮಿಳುನಾಡಿನ ಕಂಟೆಂಟ್ ಕ್ರಿಯೇಟರ್ ವೀರಮಣಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಒಂದು ಸ್ವೀಟ್ ಬಾಕ್ಸ್ ಕಳುಹಿಸುವಂತೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಅವರ ಮನೆಗೆ ಸಿಹಿತಿಂಡಿಗಳಷ್ಟೇ ಅಲ್ಲದೆ, ಹಣ್ಣು, ತರಕಾರಿ, ಬಟ್ಟೆ, ಟಿವಿ ಹಾಗೂ ಫ್ರಿಡ್ಜ್ಗಳವರೆಗೆ ವಿವಿಧ ವಸ್ತುಗಳು ಕ್ಯಾಶ್ ಆನ್ ಡೆಲಿವರಿ ಮೂಲಕ ಬರಲಾರಂಭಿಸಿವೆ. ಇದರಿಂದ ಕಂಗಾಲಾದ ಅವರು, ದಯವಿಟ್ಟು ತನಗೆ ಯಾವುದೇ ವಸ್ತುಗಳನ್ನು ಕಳುಹಿಸಬೇಡಿ ಎಂದು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

ಮಧುರೈ ಮೂಲದ ವೀರಮಣಿ ಸುಮಾರು 3.5 ಲಕ್ಷ ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದು, ಯೂಟ್ಯೂಬ್ ಚಾನೆಲ್ ಮೂಲಕವೂ ಜನಪ್ರಿಯರಾಗಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಸಿಹಿತಿಂಡಿ ತಿನ್ನುವ ಆಸೆಯಾದಾಗ, ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ತಮ್ಮ ವಿಳಾಸ ಹಾಗೂ ಫೋನ್ ಸಂಖ್ಯೆಯನ್ನು ನೀಡಿ, ಯಾರಾದರೂ ಸ್ವೀಟ್ ಬಾಕ್ಸ್ ಕಳುಹಿಸಿಕೊಡಬಹುದೇ ಎಂದು ಕೇಳಿಕೊಂಡಿದ್ದರು. ಆದರೆ, ಈ ಮನವಿ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆರಂಭದಲ್ಲಿ ವೀರಮಣಿಯ ಮನೆಗೆ ಸಿಹಿತಿಂಡಿಗಳ ಪೆಟ್ಟಿಗೆಗಳು ಬರಲಾರಂಭಿಸಿದವು. ಆದರೆ, ದಿನಗಳು ಕಳೆದಂತೆ ಪರಿಸ್ಥಿತಿ ಬದಲಾಗಿದೆ. ವಿವಿಧ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಅಪರಿಚಿತರು ಅನೇಕ ವಸ್ತುಗಳನ್ನು ಅವರ ವಿಳಾಸಕ್ಕೆ ಆರ್ಡರ್ ಮಾಡಲು ಆರಂಭಿಸಿದ್ದಾರೆ. ಹಣ್ಣು, ಹಾಲು, ತರಕಾರಿ, ಬಟ್ಟೆ ಹಾಗೂ ಆಹಾರ ಪದಾರ್ಥಗಳ ಜೊತೆಗೆ ಟಿವಿ ಮತ್ತು ರೆಫ್ರಿಜರೇಟರ್ಗಳೂ ಮನೆಗೆ ತಲುಪಲಾರಂಭಿಸಿವೆ. ಆದರೆ, ಇವೆಲ್ಲವೂ ಕ್ಯಾಶ್ ಆನ್ ಡೆಲಿವರಿ ಆರ್ಡರ್ಗಳಾಗಿದ್ದರಿಂದ, ವಸ್ತುಗಳನ್ನು ಸ್ವೀಕರಿಸಲು ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಮೆಜಾನ್, ಫ್ಲಿಪ್ಕಾರ್ಟ್, ಝೆಪ್ಟೋ ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ನಿರಂತರವಾಗಿ ಆರ್ಡರ್ಗಳು ಬರುತ್ತಿದ್ದರಿಂದ ವೀರಮಣಿ ಕಂಗಾಲಾಗಿದ್ದಾರೆ. ಡೆಲಿವರಿ ಸಿಬ್ಬಂದಿ ಮನೆಗೆ ಬಂದಾಗ ತಾನು ಊರಿನಲ್ಲಿಲ್ಲ, ಮನೆ ಬದಲಾಯಿಸಿದ್ದೇನೆ ಎಂದು ವಿವಿಧ ಕಾರಣಗಳನ್ನು ಹೇಳಿ ಆರ್ಡರ್ಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ವೀರಮಣಿಗೆ ಎದುರಾದ ಸಂಕಷ್ಟ ಇಲ್ಲಿಗೇ ನಿಂತಿಲ್ಲ. ಅವರ ವೈಯಕ್ತಿಕ ವಿವರಗಳನ್ನು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿಯೂ ಯಾರೋ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಉಚಿತ ಕಿಡ್ನಿ ದಾನಕ್ಕಾಗಿ ಅವರ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ ಎಂಬ ವರದಿಯೂ ಹರಿದಾಡಿದೆ. ಇದಾದ ಬಳಿಕ ಕೆಲವರು ಕಿಡ್ನಿ ದಾನದ ಕುರಿತು ವಿಚಾರಿಸಲು ಕರೆ ಮಾಡಲಾರಂಭಿಸಿದಾಗ, ಪರಿಸ್ಥಿತಿ ಕೈಮೀರುತ್ತಿದೆ ಎಂಬುದು ವೀರಮಣಿಗೆ ಅರಿವಾಗಿದೆ. ನಿರಂತರವಾಗಿ ಬರುತ್ತಿದ್ದ ಆರ್ಡರ್ಗಳು ಹಾಗೂ ಕರೆಗಳಿಂದ ಬೇಸತ್ತ ವೀರಮಣಿ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದಾರೆ. ಈ ಬಾರಿ ಅವರು ಕಣ್ಣೀರಿಡುತ್ತಲೇ ತನ್ನನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಮನವಿ ಮಾಡಿದ್ದಾರೆ. ‘ದಯವಿಟ್ಟು ನನಗೆ ಮತ್ತೆ ಯಾರೂ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಬೇಡಿ. ನನಗೆ ನಿಮ್ಮ ಸ್ವೀಟ್ಸ್ ಬೇಡ, ಏನೂ ಬೇಡ. ದಯವಿಟ್ಟು ನನ್ನನ್ನು ಬದುಕಲು ಬಿಡಿ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ವೀರಮಣಿಯ ವಿಳಾಸಕ್ಕೆ ಬಂದಿದ್ದ ಆರ್ಡರ್ಗಳು ಕೊನೆಗೆ ರದ್ದಾದ ಬಳಿಕ, ಡೆಲಿವರಿ ಏಜೆಂಟ್ಗಳಿಗೂ ತೊಂದರೆಯಾಗಿದೆ. ವಸ್ತುಗಳನ್ನು ತಲುಪಿಸಲು ಸಮಯ ಹಾಗೂ ಶ್ರಮ ವ್ಯಯಿಸಿದರೂ, ಗ್ರಾಹಕರು ಅವುಗಳನ್ನು ಸ್ವೀಕರಿಸದ ಕಾರಣ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಇದನ್ನು ತಮಾಷೆಯಾಗಿ ನೋಡಿದರೆ, ಇನ್ನು ಕೆಲವರು ಇಂತಹ ಕೃತ್ಯಗಳಿಂದ ಡೆಲಿವರಿ ಸಿಬ್ಬಂದಿ ಸೇರಿದಂತೆ ಹಲವರ ಸಮಯ ಮತ್ತು ಶ್ರಮ ವ್ಯರ್ಥವಾಗುವುದನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಎದುರಾಗಬಹುದಾದ ಸಮಸ್ಯೆಗಳಿಗೂ ಈ ಘಟನೆ ಉದಾಹರಣೆಯಾಗಿದೆ.