ನವದೆಹಲಿ, ಅ.13 (DaijiworldNews/AK):ದೀಪಾವಳಿ ಬಳಿಕ ಯುಪಿಐ ಶುಲ್ಕ ಜಾರಿ ಮಾಡಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಿಳಿಸಿದೆ.

ಯುಪಿಐ ವಹಿವಾಟುಗಳ ಮೇಲಿನ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಎನ್ಪಿಸಿಐ ನವೆಂಬರ್ ಎರಡನೇ ವಾರದಲ್ಲಿ ಜಾರಿಯಾಗಲಿದೆ ಎಂದು ಹೇಳಿದೆ.
ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು, ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್(MDR) ಅನ್ನು ದೀಪಾವಳಿ ಮುಗಿದ ತಕ್ಷಣ ಜಾರಿಗೆ ತರಲು ಯುಪಿಐ ಮತ್ತು ಸರ್ವೀಸಸ್ ಸ್ಟೀರಿಂಗ್ ಕಮಿಟಿ ನಿರ್ಧರಿಸಿದೆ ಎಂದು ಎನ್ಪಿಸಿಐ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಜಾರಿಯಾಗುವ ನಿಖರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಹಿಂದಿನ ವೇಳಾಪಟ್ಟಿಯ ಪ್ರಕಾರ ಈ ಶುಲ್ಕವು ಅಕ್ಟೋಬರ್ 15 ರಿಂದ ಜಾರಿಗೆ ಬರಬೇಕಿತ್ತು. ಆದರೆ, ಆ ಸಮಯವು ಗ್ರಾಹಕರ ಖರೀದಿ ಗರಿಷ್ಠ ಮಟ್ಟದಲ್ಲಿರುವ ದಸರಾ-ದೀಪಾವಳಿ ಹಬ್ಬದ ಋತುವಿನೊಂದಿಗೆ ಹೊಂದಿಕೆಯಾಗುತ್ತಿತ್ತು. ಹಬ್ಬದ ಹೊತ್ತಿನಲ್ಲಿ ದಿಢೀರ್ ಬದಲಾವಣೆ ತಂದರೆ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಮತ್ತು ಪಾವತಿ ಕಂಪನಿಗಳು ತಮ್ಮ ತಾಂತ್ರಿಕ ವ್ಯವಸ್ಥೆಗಳನ್ನು ಅಪ್ಡೇಟ್ ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾವುದಕ್ಕೆ ಎಷ್ಟು ಪಾವತಿ ದರ?
2,000 ರೂ. ವರೆಗಿನ ವಹಿವಾಟು: ಯಾವುದೇ ಶುಲ್ಕವಿಲ್ಲ
2,000 ರೂ. ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳು (P2M): 0.4% MDR ಅನ್ವಯ
ಗರಿಷ್ಠ ಮಿತಿ 75,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಗರಿಷ್ಠ ಶುಲ್ಕವನ್ನು 300 ರೂ.ಗೆ ಮಿತಿಗೊಳಿಸಲಾಗಿದೆ.
ರೈಲ್ವೆ, ಟೆಲಿಕಾಂ, ವಿಮೆ, ಇಂಧನ, ಮತ್ತು ಕೃಷಿ ಪರಿಕರಗಳ ಖರೀದಿಗೆ 2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ 0.4% ಬದಲಾಗಿ 5 ರೂ.ಸ್ಥಿರ ಶುಲ್ಕ ಇರುತ್ತದೆ.
ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕರ್ ಮತ್ತು ಸೆಕ್ಯುರಿಟೀಸ್ ಪಾವತಿಗಳಿಗೆ 0.02% MDR ಗರಿಷ್ಠ 300 ರೂ.
ಗ್ರಾಹಕರಿಗೆ ಉಚಿತ: ಈ ಎಂಡಿಆರ್ ಶುಲ್ಕವನ್ನು ಕೇವಲ ವ್ಯಾಪಾರಿಗಳು ಮಾತ್ರ ಭರಿಸಬೇಕು. ಸಾಮಾನ್ಯ ಗ್ರಾಹಕರು ಹಣ ಪಾವತಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ಕಡಿತವಾಗುವುದಿಲ್ಲ. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಯುಪಿಐ ಮೂಲಕ ಎಷ್ಟು ಹಣ ಕಳುಹಿಸಿದರೂ ಅದು ಸಂಪೂರ್ಣ ಉಚಿತವಾಗಿರುತ್ತದೆ.
ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಕ್ಯೂಆರ್ (QR) ಕೋಡ್ ಮೂಲಕ ಆದಾಯ ಪಡೆಯುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.