ಬೆಂಗಳೂರು, ಅ.13 (DaijiworldNews/TA): ಭಾರತೀಯ ಸಿಂಗಲ್ ಮಾಲ್ಟ್ ವಿಸ್ಕಿ ಬ್ರ್ಯಾಂಡ್ ‘ಇಂದ್ರಿ’ ತನ್ನ ವಿಶೇಷ ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ವಿಶೇಷ ಆವೃತ್ತಿಯು ಸೀಮಿತ ಸಂಖ್ಯೆಯ ಬಾಟಲಿಗಳಲ್ಲಿ ಲಭ್ಯವಾಗಲಿದೆ. ಪಿಕಾಡಿಲಿ ಡಿಸ್ಟಿಲರೀಸ್ನ ಈ ವಿಸ್ಕಿಯನ್ನು ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್ ರೂಪಿಸಿದ್ದಾರೆ.

ಲಂಡನ್ನಲ್ಲಿ ನಡೆದ ಅನಾವರಣದ ಬಳಿಕ ಭಾರತೀಯ ಗ್ರಾಹಕರಿಗಾಗಿ ಪರಿಚಯಿಸಲಾಗಿರುವ ಈ ಆವೃತ್ತಿಯ ವಿಶೇಷತೆಯೆಂದರೆ, ಪೋರ್ಚುಗಲ್ನ ರೂಬಿ ಪೋರ್ಟ್ ವೈನ್ ಪೀಪಾಯಿಗಳಲ್ಲಿ ಹದಗೊಳಿಸಿರುವುದು. ಸೀಮಿತ ಸಂಗ್ರಹದ ಈ ವಿಸ್ಕಿಯು ಸಂಗ್ರಹಕಾರರು ಹಾಗೂ ವಿಸ್ಕಿ ಪ್ರಿಯರ ಗಮನ ಸೆಳೆಯುವ ನಿರೀಕ್ಷೆಯಿದೆ. ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ರ ಭಾರತೀಯ ಆವೃತ್ತಿಯ ಕೇವಲ 600 ಬಾಟಲಿಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಪ್ರತಿ ಬಾಟಲಿಗೂ ಪ್ರತ್ಯೇಕ ಸರಣಿ ಸಂಖ್ಯೆ ಇರಲಿದೆ.
ಉತ್ತರ ಭಾರತದ ಆರು ಸಾಲಿನ ಬಾರ್ಲಿಯನ್ನು ಬಳಸಿ, ಸಾಂಪ್ರದಾಯಿಕ ತಾಮ್ರದ ಪಾಟ್ ಸ್ಟಿಲ್ಗಳಲ್ಲಿ ಭಟ್ಟಿ ಇಳಿಸಲಾಗುತ್ತದೆ. ಬಳಿಕ ಪೋರ್ಚುಗಲ್ನ ರೂಬಿ ಪೋರ್ಟ್ ವೈನ್ ಪೀಪಾಯಿಗಳಲ್ಲಿ ಹದಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯು ವಿಸ್ಕಿಗೆ ವಿಶಿಷ್ಟ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ. ಈ ವಿಶೇಷ ಆವೃತ್ತಿಯಲ್ಲಿ ಬ್ಲ್ಯಾಕ್ ಚೆರ್ರಿ, ಕಾಡು ಹಣ್ಣುಗಳು, ಹುರಿದ ಒಣ ಬೀಜಗಳು, ವೆನಿಲ್ಲಾ, ಜೇನುತುಪ್ಪ ಮತ್ತು ಅಂಜೂರದ ಹಣ್ಣಿನ ಸುವಾಸನೆ ಹಾಗೂ ರುಚಿಯ ಸಂಯೋಜನೆ ಇದೆ ಎಂದು ಕಂಪನಿ ತಿಳಿಸಿದೆ. ಬಾಟಲಿ ಮತ್ತು ಪ್ಯಾಕೇಜಿಂಗ್ ವಿನ್ಯಾಸವನ್ನು ‘ಇಂಡಿಯಾ ಸರ್ಕಸ್’ ಸಂಸ್ಥೆಯ ವಿನ್ಯಾಸಗಾರ ಕೃಷ್ಣಾ ಮೆಹ್ತಾ ರೂಪಿಸಿದ್ದಾರೆ. ಭಾರತದ ರಾಜಮನೆತನದ ಪರಂಪರೆ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಮಾರ್ವಾಡಿ ಕುದುರೆ ಮತ್ತು ಹೂವಿನ ವಿನ್ಯಾಸಗಳನ್ನು ಇದರಲ್ಲಿ ಬಳಸಲಾಗಿದೆ. ಇಂದ್ರಿ ಬ್ರ್ಯಾಂಡ್ ತನ್ನ ಸಿಂಗಲ್ ಮಾಲ್ಟ್ ವಿಸ್ಕಿಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. 2023ರಲ್ಲಿ ಇಂದ್ರಿಯ ದಿವಾಳಿ ಕಲೆಕ್ಟರ್ಸ್ ಎಡಿಷನ್ಗೆ ‘ವಿಶ್ವದ ಅತ್ಯುತ್ತಮ ವಿಸ್ಕಿ’ ಎಂಬ ಪ್ರಶಸ್ತಿ ದೊರೆತಿತ್ತು ಎಂದು ವರದಿಯಾಗಿದೆ.
2026ರ ಆವೃತ್ತಿಯೂ ಲಂಡನ್ನ ‘ದಿ ವಿಸ್ಕಿ ಶೋ’ನಲ್ಲಿ ಮೆಚ್ಚುಗೆ ಪಡೆದಿದ್ದು, ‘ಯುಎಸ್ಎ ಸ್ಪಿರಿಟ್ಸ್ ರೇಟಿಂಗ್ಸ್ 2026’ರಲ್ಲಿ 96 ಅಂಕಗಳೊಂದಿಗೆ ಡಬಲ್ ಗೋಲ್ಡ್ ಪ್ರಶಸ್ತಿ ಪಡೆದಿದೆ ಎಂದು ಮೂಲ ವರದಿ ತಿಳಿಸಿದೆ. ಲಂಡನ್ ಮತ್ತು ನ್ಯೂಯಾರ್ಕ್ನ ಸ್ಪರ್ಧೆಗಳಲ್ಲಿಯೂ ಚಿನ್ನದ ಪದಕಗಳನ್ನು ಗೆದ್ದಿರುವುದಾಗಿ ವರದಿಯಾಗಿದೆ. ವರದಿಯ ಪ್ರಕಾರ, ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ರ 700 ಮಿ.ಲೀ. ಬಾಟಲಿ, ಶೇ. 50 ಆಲ್ಕೋಹಾಲ್ ಪ್ರಮಾಣದೊಂದಿಗೆ ಅಕ್ಟೋಬರ್ ಮಧ್ಯಭಾಗದಿಂದ ಭಾರತದ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಬೆಂಗಳೂರು, ಚಂಡೀಗಢ, ಗುರುಗ್ರಾಮ್. ವಿದೇಶಿ ಪ್ರಯಾಣಿಕರಿಗಾಗಿ ಶೇ. 58.5 ಆಲ್ಕೋಹಾಲ್ ಪ್ರಮಾಣದ ಅಂತಾರಾಷ್ಟ್ರೀಯ ಆವೃತ್ತಿಯು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಆಯ್ದ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಹಾಗೂ ದುಬೈ ಡ್ಯೂಟಿ ಫ್ರೀನಲ್ಲಿ ಲಭ್ಯವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಬಿಡುಗಡೆಯ ಕುರಿತು ಮಾತನಾಡಿರುವ ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್, ಈ ಆವೃತ್ತಿಯು ಕೇವಲ ದೀಪಾವಳಿ ಆಚರಣೆಗೆ ಸೀಮಿತವಾಗಿಲ್ಲ, ಜಾಗತಿಕ ಮಟ್ಟದಲ್ಲಿ ಭಾರತೀಯ ಸಿಂಗಲ್ ಮಾಲ್ಟ್ ವಿಸ್ಕಿ ಬೆಳೆದುಬಂದಿರುವುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿಯೂ ಜಾಗತಿಕ ಗುಣಮಟ್ಟದ ವಿಸ್ಕಿಯನ್ನು ತಯಾರಿಸಬಹುದು ಎಂಬುದನ್ನು ಇಂದ್ರಿ ತೋರಿಸಿಕೊಟ್ಟಿದೆ ಎಂಬುದು ಅವರ ಅಭಿಪ್ರಾಯ.