ಬೆಂಗಳೂರು, ಅ.13 (DaijiworldNews/AA): ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೆ, ಇದ್ಯಾವುದರ ಬಗ್ಗೆ ಗಮನ ಇಲ್ಲದೇ ರಾಜ್ಯ ಸರ್ಕಾರ ರಹಸ್ಯ ಕಾರ್ಯಾಚರಣೆಯಲ್ಲಿ ಮುಳುಗಿ ಹೋಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ 217 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿದೆ, 46,000 ಕೋಟಿ ರೂಪಾಯಿ ನಷ್ಟ ಆಗಿದೆ, ಆದರೆ ಸರ್ಕಾರ 1,200 ಕೋಟಿ ರೂಪಾಯಿ ನೀಡುತ್ತಿರುವುದು ಎಷ್ಟು ಸರಿ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಮೂಲಗಳ ಪ್ರಕಾರ ಸರ್ಕಾರ ರೈತರಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಬರಗಾಲದ ಹಾಗೂ ಸರ್ಕಾರದ ಕ್ರಮಗಳ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ರಾಜ್ಯದ 32 ಸಚಿವರು ಎಂದಾದರೂ ರಾಜ್ಯ ಪ್ರವಾಸ ಕೈಗೊಂಡಿದ್ದಾರಾ" ಎಂದು ಪ್ರಶ್ನಿಸಿದರು.