ಹೈದರಾಬಾದ್, ಅ.14 (DaijiworldNews/AA): ಸಾಧನೆಗೆ ನಮ್ಮ ದೈಹಿಕ ದೃಢತೆ, ವೈಫಲ್ಯ ಯಾವುದೇ ಅಡ್ಡಿಬರುವುದಿಲ್ಲ. ಸಾಧಿಸುವ ಛಲವಿದ್ದರೆ ದೈಹಿಕ ವೈಫಲ್ಯವನ್ನೇ ಮೆಟ್ಟಿನಿಂತು ಸಾಧನೆ ಮಾಡಬಹುದು ಎಂಬುದಕ್ಕೆ ಸಾಫ್ಟ್ವೇರ್ ಎಂಜಿನಿಯರ್ ಸಾಯಿ ಭರತ್ ಅವರೇ ಸಾಕ್ಷಿ.

ಸಾಯಿ ಭರತ್ ಅವರಿಗೆ ಹುಟ್ಟಿನಿಂದಲೇ ಎಡಗೈ ಇಲ್ಲ. ಸಾಯಿ ಭರತ್ ಅವರು 2019ರಿಂದ 2023ರವರೆಗೆ ಎನ್ಐಟಿ ವಾರಂಗಲ್ನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ವ್ಯಾಸಂಗ ಮಾಡಿದರು. ತಾಂತ್ರಿಕ ಶಿಕ್ಷಣದ ಜೊತೆಗೆ ಸಂಘಟನಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ಕಾಲೇಜು ಹಂತದಲ್ಲೇ ವೃತ್ತಿಜೀವನಕ್ಕೆ ಅಗತ್ಯವಾದ ಅನುಭವ ಪಡೆದರು.
2022ರ ಮೇ ಯಿಂದ ಜುಲೈವರೆಗೆ ಚೆನ್ನೈನಲ್ಲಿ ಅಮೆಜಾನ್ ಸಂಸ್ಥೆಯಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಇಂಟರ್ನ್ ಆಗಿ ಕೆಲಸ ಮಾಡಿದ್ದರು. 2023ರಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಸಾಯಿ ಭರತ್ ಅವರು ಸಾರಸ್ ಅನಾಲಿಟಿಕ್ಸ್ ಸಂಸ್ಥೆಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಇದಕ್ಕೂ ಮೊದಲು, 2022ರ ಡಿಸೆಂಬರ್ನಿಂದ 2023ರ ಫೆಬ್ರವರಿವರೆಗೆ ಅದ್ವೈತಾ ಎಜುಕೇರ್ ಸಂಸ್ಥೆಯಲ್ಲಿ ಬ್ಯಾಕೆಂಡ್ ಡೆವಲಪರ್ ಇಂಟರ್ನ್ ಆಗಿಯೂ ಕೆಲಸ ಮಾಡಿದ್ದರು.
ಸಾಯಿ ಭರತ್ ಅವರು 2024ರ ಜನವರಿಯಲ್ಲಿ ಅಮೆಜಾನ್ಗೆ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಪ್ರಸ್ತುತ ಅವರು ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ಅಮೆಜಾನ್ ಪೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ವಾರ್ಷಿಕ ವೇತನ 50 ಲಕ್ಷಕ್ಕೂ ಅಧಿಕ ಎಂದು ಹೇಳಲಾಗಿದೆ. ಅವರು 2026ರ ಅಕ್ಟೋಬರ್ನಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಎಂಜಿನಿಯರ್-ಐಐ ಹುದ್ದೆಗೆ ಬಡ್ತಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ತಮ್ಮ ದೈಹಿಕ ಸವಾಲುಗಳ ನಡುವೆಯೂ ಜಾಗತಿಕ ತಂತ್ರಜ್ಞಾನ ಕಂಪನಿ ಅಮೆಜಾನ್ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಯಿ ಭರತ್ ಅವರ ಈ ಸಾಧನೆ ಅನೇಕ ಯುವಜನರಿಗೆ ಪ್ರೇರಣೆಯಾಗಿದೆ.