ಬೆಂಗಳೂರು, ಅ.14 (DaijiworldNews/AA): ಬೆಂಗಳೂರು-ಮಂಗಳೂರು ನಡುವಿನ ಅತ್ಯಂತ ಸವಾಲಿನ ಮತ್ತು ಕಷ್ಟಕರವಾದ ಘಾಟ್ ಸೆಕ್ಷನ್ನಲ್ಲಿ ಶೀಘ್ರದಲ್ಲೇ ಡೀಸೆಲ್ ಲೋಕೋಮೋಟಿವ್ಗಳಿಗೆ ವಿದಾಯ ಹೇಳಲು ನೈಋತ್ಯ ರೈಲ್ವೆ ಸಜ್ಜಾಗಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಉದ್ದದ ಈ ಕಡಿದಾದ ಘಾಟ್ ಪ್ರದೇಶದಲ್ಲಿ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ತಯಾರಿ ನಡೆಸಲಾಗುತ್ತಿದೆ.

ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾರ್ಯ ಮುಗಿದು ಸುಮಾರು ಒಂದು ವರ್ಷ ಕಳೆದಿದೆ. ಇದೀಗ ಕಡಿದಾದ ಇಳಿಜಾರುಗಳು, ಸುರಂಗಗಳು ಹಾಗೂ ಸೇತುವೆಗಳನ್ನು ಒಳಗೊಂಡ ಈ ದುರ್ಗಮ ಹಾದಿಯಲ್ಲಿ ಎಲೆಕ್ಟ್ರಿಕ್ ರೈಲುಗಳ ಕಾರ್ಯಾಚರಣೆ ಆರಂಭಿಸಲು ರೈಲ್ವೆ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದೆ. ಇದು ಬೆಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲು ಮಾರ್ಗವನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ಗೆ ಪರಿವರ್ತಿಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಸಕಲೇಶಪುರ ಸಬ್ಸ್ಟೇಷನ್ ಕಾಮಗಾರಿ ಮುಗಿದ ತಕ್ಷಣ ಎಲೆಕ್ಟ್ರಿಕ್ ಟ್ರಯಲ್ ಆರಂಭ:
ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ವಿಭಾಗದಲ್ಲಿ ಎಲೆಕ್ಟ್ರಿಕ್ ಇಂಜಿನ್ಗಳ ಸಂಚಾರಕ್ಕೆ ವಿದ್ಯುತ್ ಪೂರೈಸಲು ಸಕಲೇಶಪುರದಲ್ಲಿ ಟ್ರ್ಯಾಕ್ಷನ್ ಸಬ್ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಸಬ್ಸ್ಟೇಷನ್ ಕೆಲಸ ಪೂರ್ಣಗೊಂಡ ತಕ್ಷಣವೇ ರೈಲ್ವೆ ಅಧಿಕಾರಿಗಳು ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ಲೋಕೋಮೋಟಿವ್ ಪ್ರಾಯೋಗಿಕ ಸಂಚಾರ ನಡೆಸಲಿದ್ದಾರೆ ಎಂದು ಎಸ್ಡಬ್ಲ್ಯುಆರ್ ಮೈಸೂರು ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ರೈಲುಗಳ ಸಂಚಾರದ ಪೂರ್ವಭಾವಿಯಾಗಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಪರೀಕ್ಷೆಗಳು ಕಳೆದ ತಿಂಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಎಲೆಕ್ಟ್ರಿಕ್ ಇಂಜಿನ್ ಸಂಚಾರಕ್ಕೆ ಅಗತ್ಯ ಸಿದ್ಧತೆಗಳು ಮುಂದುವರಿದಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎಲೆಕ್ಟ್ರಿಕ್ಗೆ ಬದಲಾಗಲಿರುವ 7 ಪ್ರಮುಖ ರೈಲುಗಳು:
ಘಾಟ್ ವಿಭಾಗದಲ್ಲಿ ಒಟ್ಟು ಏಳು ರೈಲುಗಳನ್ನು ಸಂಪೂರ್ಣವಾಗಿ ಎ ಸಿ ಟ್ರ್ಯಾಕ್ಷನ್ಗೆ ಬದಲಾಯಿಸಲು ನೈಋತ್ಯ ರೈಲ್ವೆ ಪ್ರಸ್ತಾಪಿಸಿದೆ. ಆಯ್ಕೆಯಾದ ರೈಲುಗಳ ಪಟ್ಟಿ ಇಲ್ಲಿದೆ:
ಎಸ್ಎಂವಿಟಿ ಬೆಂಗಳೂರು - ಮುರುಡೇಶ್ವರ ಎಕ್ಸ್ಪ್ರೆಸ್
ಕೋಯಿಕ್ಕೋಡ್ ಎಕ್ಸ್ಪ್ರೆಸ್
ಯಶವಂತಪುರ - ಕಾರವಾರ ಎಕ್ಸ್ಪ್ರೆಸ್
ಯಶವಂತಪುರ - ಮಂಗಳೂರು ಜಂಕ್ಷನ್ ವಾರಸುತಿರಿ ಎಕ್ಸ್ಪ್ರೆಸ್
ಗೊಮ್ಮಟೇಶ್ವರ ಎಕ್ಸ್ಪ್ರೆಸ್
ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್
ಕೆಎಸ್ಆರ್ ಬೆಂಗಳೂರು - ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್
ಈ ಏಳು ರೈಲುಗಳ ಪೈಕಿ ನಾಲ್ಕು ರೈಲುಗಳು ಪ್ರಸ್ತುತ ಸಂಪೂರ್ಣ ಡೀಸೆಲ್ ಇಂಜಿನ್ನಿಂದ ಸಂಚರಿಸುತ್ತಿದ್ದರೆ, ಉಳಿದ ರೈಲುಗಳು ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದರೂ ಭಾಗಶಃ ಡೀಸೆಲ್ ಪವರ್ ಮೇಲೆ ಅವಲಂಬಿತವಾಗಿವೆ. ಈ ಹೊಸ ಬದಲಾವಣೆಯಿಂದಾಗಿ ಇನ್ನು ಮುಂದೆ ಈ ಎಲ್ಲಾ ರೈಲುಗಳು ಇಡೀ ಘಾಟ್ ಮಾರ್ಗದಲ್ಲೂ ಎಲೆಕ್ಟ್ರಿಕ್ ಇಂಜಿನ್ಗಳ ಮೂಲಕವೇ ಸಂಚಾರ ಮಾಡಲು ಸಾಧ್ಯವಾಗುತ್ತದೆ.
ಘಾಟ್ ಹತ್ತಲು ಇಂದಿಗೂ ಡೀಸೆಲ್ ಎಂಜಿನ್ಗಳೇ ಆಸರೆ
ಕೋಝಿಕ್ಕೋಡ್ ಎಕ್ಸ್ಪ್ರೆಸ್, ಎಸ್ಎಮ್ವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಮತ್ತು ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲುಗಳು ಘಾಟ್ ವಿಭಾಗದಲ್ಲಿ ಸಂಚರಿಸುವಾಗ ಇಂದಿಗೂ ಭಾಗಶಃ ಡೀಸೆಲ್ ಲೋಕೋಮೋಟಿವ್ಗಳನ್ನೇ ಬಳಸುತ್ತಿವೆ. ಇತರ ಮಾರ್ಗಗಳಲ್ಲಿ ಇವು ಎಲೆಕ್ಟ್ರಿಕ್ ಇಂಜಿನ್ನಿಂದ ಓಡಿದರೂ, ಘಾಟ್ನ ಕಠಿಣ ಹಾದಿಯನ್ನು ದಾಟಲು ಡೀಸೆಲ್ ಶಕ್ತಿಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಇದೀಗ ಎಲೆಕ್ಟ್ರಿಕ್ ಪ್ರಯೋಗಗಳು ಯಶಸ್ವಿಯಾದರೆ, ಈ ಮಾರ್ಗದಲ್ಲಿ ಸಂಪೂರ್ಣವಾಗಿ ಡೀಸೆಲ್ ಮುಕ್ತ ಕಾರ್ಯಾಚರಣೆ ಆರಂಭವಾಗಲಿದೆ. ಜೊತೆಗೆ ರೈಲ್ವೆ ಕಾರ್ಯಾಚರಣೆಯ ದಕ್ಷತೆ ಹೆಚ್ಚುವುದರ ಜೊತೆಗೆ ಪರಿಸರ ಮಾಲಿನ್ಯವೂ ತಗ್ಗಲಿದೆ.
ಸಬ್ಸ್ಟೇಷನ್ ಕಾಮಗಾರಿಯೇ ಪ್ರಮುಖ ಮೈಲಿಗಲ್ಲು
55 ಕಿ.ಮೀ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ವಿಭಾಗವು ಬೆಂಗಳೂರು ಮತ್ತು ಮಂಗಳೂರು ನಡುವಿನ ಅತ್ಯಂತ ಪ್ರಮುಖ ರೈಲು ಕೊಂಡಿಯಾಗಿದೆ. ಇಲ್ಲಿನ ಕಡಿದಾದ ಏರಿಳಿತ ಹಾಗೂ ಭೌಗೋಳಿಕ ಸವಾಲುಗಳಿಂದಾಗಿ ರೈಲು ಕಾರ್ಯಾಚರಣೆ ಯಾವಾಗಲೂ ಅತ್ಯಂತ ಸವಾಲಿನಿಂದ ಕೂಡಿರುತ್ತದೆ.
ವಿದ್ಯುದ್ದೀಕರಣ ಮುಗಿದು, ಈಗ ಸಬ್ಸ್ಟೇಷನ್ ಕಾಮಗಾರಿ ಅಂತಿಮ ಹಂತದಲ್ಲಿರುವುದರಿಂದ, ಶೀಘ್ರದಲ್ಲೇ ನಡೆಯಲಿರುವ ಎಲೆಕ್ಟ್ರಿಕ್ ಟ್ರಯಲ್ ಪ್ರಮುಖ ಮೈಲಿಗಲ್ಲಾಗಲಿದೆ. ಅಗತ್ಯ ಮೂಲಸೌಕರ್ಯ ಮತ್ತು ಟ್ರಯಲ್ಗಳು ಪೂರ್ಣಗೊಂಡರೆ, ಈ ಕಷ್ಟಕರ ಘಾಟ್ ಮಾರ್ಗದಲ್ಲಿ ಡೀಸೆಲ್ ಇಂಜಿನ್ಗಳ ಬಳಕೆ ನಿಲ್ಲಲಿದ್ದು, ರೈಲುಗಳ ಸಂಚಾರ ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ಇಂಧನ ಉಳಿತಾಯವೂ ಆಗಲಿದೆ.