ಬೆರ್ಹಾಂಪುರ, ಅ.14 (DaijiworldNews/TA): ಒಡಿಶಾದ ಆಸ್ಪತ್ರೆಯೊಂದರಲ್ಲಿ ಅತ್ಯಂತ ಅಪರೂಪದ ದೈಹಿಕ ರಚನೆಯನ್ನು ಹೊಂದಿರುವ ಸಯಾಮಿ ಅವಳಿಗಳು ಜನಿಸಿವೆ. ಎರಡು ಪ್ರತ್ಯೇಕ ತಲೆಗಳು ಮತ್ತು ಎರಡು ಬೆನ್ನುಹುರಿಗಳನ್ನು ಹೊಂದಿರುವ ಈ ನವಜಾತ ಶಿಶುವಿಗೆ ಒಂದೇ ಹೃದಯ ಹಾಗೂ ಒಂದೇ ದೇಹವಿದೆ. ಮಗುವಿನ ಅಪರೂಪದ ಅಂಗರಚನೆ ವೈದ್ಯರ ಗಮನ ಸೆಳೆದಿದ್ದು, ಸದ್ಯ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜನನದ ವೇಳೆ 2.6 ಕೆ.ಜಿ. ತೂಕವಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಎದೆಯ ಮೇಲ್ಭಾಗದಲ್ಲಿ ಎರಡು ಪ್ರತ್ಯೇಕ ತಲೆಗಳಿದ್ದು, ದೇಹದ ಪ್ರಮುಖ ಅಂಗಾಂಗಗಳು ಹಂಚಿಕೊಂಡಿರುವ ಈ ಮಗುವಿನ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿರಂತರ ನಿಗಾ ಇರಿಸಿದ್ದಾರೆ. ಮಗುವಿನ ಸ್ಥಿತಿಯ ಸಂಕೀರ್ಣತೆಯನ್ನು ಪರಿಗಣಿಸಿ ಹಿರಿಯ ಮಕ್ಕಳ ತಜ್ಞರ ತಂಡ ಚಿಕಿತ್ಸೆ ನೀಡುತ್ತಿದೆ. ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರ ನೇತೃತ್ವದಲ್ಲಿ ಆಂತರಿಕ ಅಂಗಾಂಗಗಳ ಸ್ಥಿತಿಯನ್ನು ತಿಳಿಯಲು ಸಿಟಿ ಸ್ಕ್ಯಾನ್, ಎಂಆರ್ಐ ಮತ್ತು ಎಕೋಕಾರ್ಡಿಯೋಗ್ರಾಮ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಮಗುವಿಗೆ ಒಂದೇ ಹೃದಯವಿರುವುದರಿಂದ ಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿದೆ. ಹೆಚ್ಚಿನ ತಜ್ಞರ ಚಿಕಿತ್ಸೆ ಅಗತ್ಯವಾದಲ್ಲಿ ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲು ವೈದ್ಯರು ನಿರ್ಧರಿಸಿದ್ದಾರೆ. ಕಂಧಮಾಲ್ ಜಿಲ್ಲೆಯ ತುಮುಡಿಬಂಧ್ ವ್ಯಾಪ್ತಿಯ ತಿಡಿಪದರ್ ಗ್ರಾಮದ ತ್ರಿಲೋಚನ್ ಮಾಝಿ ಮತ್ತು ರೂನಿ ಮಾಝಿ ದಂಪತಿಗೆ ಜನಿಸಿದ ಮೊದಲ ಮಗು ಇದಾಗಿದೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿಗೆ ಮಗುವಿನ ಅಸಾಮಾನ್ಯ ದೈಹಿಕ ರಚನೆ ಆಘಾತವನ್ನುಂಟುಮಾಡಿದೆ. ಕಡು ಬಡತನದಲ್ಲಿರುವ ಬುಡಕಟ್ಟು ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಅಗತ್ಯವಾಗಬಹುದಾದ ತೀವ್ರ ನಿಗಾ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸುವುದು ದೊಡ್ಡ ಸವಾಲಾಗಿದೆ. ಮಗುವಿನ ಜೀವ ಉಳಿಸಲು ಸರ್ಕಾರ ಹಾಗೂ ಸಾರ್ವಜನಿಕರು ನೆರವು ನೀಡಬೇಕೆಂದು ಕುಟುಂಬ ನಿರೀಕ್ಷಿಸುತ್ತಿದೆ.
ಏನಿದು ಡೈಸೆಫಾಲಿಕ್ ಪ್ಯಾರಾಪಾಗಸ್? : ವೈದ್ಯಕೀಯ ವಿಜ್ಞಾನದಲ್ಲಿ ಈ ಅಪರೂಪದ ಸ್ಥಿತಿಯನ್ನು ‘ಡೈಸೆಫಾಲಿಕ್ ಪ್ಯಾರಾಪಾಗಸ್’ ಎಂದು ಕರೆಯಲಾಗುತ್ತದೆ. ಇದು ಸಯಾಮಿ ಅವಳಿಗಳ ಒಂದು ಅಪರೂಪದ ರೂಪವಾಗಿದ್ದು, ಎರಡು ತಲೆಗಳು ಒಂದೇ ದೇಹಕ್ಕೆ ಜೋಡಣೆಯಾಗಿರುತ್ತವೆ. ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಒಂದೇ ಫಲವತ್ತಾದ ಭ್ರೂಣವು ಸಂಪೂರ್ಣವಾಗಿ ವಿಭಜನೆಯಾಗದೆ ಉಳಿದಾಗ ಇಂತಹ ಜೋಡಿತ ಅವಳಿಗಳ ಬೆಳವಣಿಗೆ ಸಂಭವಿಸಬಹುದು. ಈ ಸ್ಥಿತಿಯಲ್ಲಿ ಎರಡು ತಲೆಗಳು ಮತ್ತು ಪ್ರತ್ಯೇಕ ಮೆದುಳುಗಳಿದ್ದರೂ, ಹೃದಯದಂತಹ ಪ್ರಮುಖ ಅಂಗಾಂಗಗಳು ಒಂದೇ ಆಗಿರಬಹುದು.
ಹೃದಯ ಸೇರಿದಂತೆ ಪ್ರಮುಖ ಅಂಗಾಂಗಗಳು ಹಂಚಿಕೊಂಡಿರುವುದರಿಂದ ಇಂತಹ ಶಿಶುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಪ್ರತ್ಯೇಕಿಸುವುದು ಅತ್ಯಂತ ಸಂಕೀರ್ಣ ಹಾಗೂ ಅಪಾಯಕಾರಿ. ಮಗುವಿನ ಅಂಗಾಂಗಗಳ ರಚನೆ ಮತ್ತು ಕಾರ್ಯನಿರ್ವಹಣೆಯ ಕುರಿತು ಹೆಚ್ಚಿನ ಪರೀಕ್ಷೆಗಳ ವರದಿ ಬಂದ ಬಳಿಕವೇ ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರು ನಿರ್ಧರಿಸಲಿದ್ದಾರೆ.