ಬೆಂಗಳೂರು, ಅ.14 (DaijiworldNews/TA): ಸಿಐಡಿ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿರುವ ಅಪರೂಪದ ‘ಆಫ್ರಿಕನ್ ಗ್ರೇ ಗಿಳಿ’ಯನ್ನು ಮರಳಿ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಜಾಜಿನಗರದ ನಿವಾಸಿ ಆರ್. ಮಹೇಶ್ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ನೋಟಿಸ್ ಜಾರಿ ಮಾಡಿದೆ. ಅರ್ಜಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೂ ನಿರ್ದೇಶನ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಲಾಗಿದೆ.
ಏನಿದು ಪ್ರಕರಣ? : ಅರ್ಜಿದಾರ ಮಹೇಶ್ ಕುಮಾರ್ ಅವರ ಪ್ರಕಾರ, ಅವರು ಹಕ್ಕಿ ಪ್ರೇಮಿಯಾಗಿದ್ದು, 2018ರಲ್ಲಿ ಸ್ನೇಹಿತರೊಬ್ಬರು ಅಂಗವೈಕಲ್ಯ ಹೊಂದಿದ್ದ ಆಫ್ರಿಕನ್ ಗ್ರೇ ಗಿಳಿಯನ್ನು ಅವರಿಗೆ ನೀಡಿದ್ದರು. ಒಂದು ರೆಕ್ಕೆಯಲ್ಲಿ ಚಲನೆ ಇಲ್ಲದ ಕಾರಣ ಗಿಳಿಗೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮಾನವೀಯ ದೃಷ್ಟಿಯಿಂದ ಅದಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ, 2026ರ ಜುಲೈ 27ರಂದು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಮ್ಮ ನಿವಾಸದಲ್ಲಿದ್ದ ಗಿಳಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗಿಳಿಯನ್ನು ವಶಕ್ಕೆ ಪಡೆದ ಬಳಿಕ ಜುಲೈ 31ರಂದು ಅಧಿಕಾರಿಗಳು ನೋಟಿಸ್ ಜಾರಿ ಮಾಡಿ, ತನಿಖೆಗೆ ಸಹಕರಿಸುವಂತೆ ಹಾಗೂ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದರು. ಸೂಚನೆ ಪಾಲಿಸದಿದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 35(3)ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ತಾನು ಗಿಳಿಯನ್ನು ವ್ಯಾಪಾರದ ಉದ್ದೇಶಕ್ಕಾಗಿ ಖರೀದಿಸಿಲ್ಲ ಅಥವಾ ಮಾರಾಟ ಮಾಡಲು ಪ್ರಯತ್ನಿಸಿಲ್ಲ. ಹಾರಲು ಸಾಧ್ಯವಾಗದ ಅಂಗವಿಕಲ ಹಕ್ಕಿಗೆ ಆಶ್ರಯ ನೀಡಿ ಆರೈಕೆ ಮಾಡುತ್ತಿದ್ದೆ ಎಂದು ಮಹೇಶ್ ಕುಮಾರ್ ವಾದಿಸಿದ್ದಾರೆ. ಹೀಗಾಗಿ ಸಿಐಡಿ ನೀಡಿರುವ ಷೋಕಾಸ್ ನೋಟಿಸ್ ರದ್ದುಪಡಿಸಬೇಕು ಹಾಗೂ ವಶಪಡಿಸಿಕೊಂಡಿರುವ ಗಿಳಿಯನ್ನು ಮರಳಿ ತಮ್ಮ ಸುಪರ್ದಿಗೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳು ನ್ಯಾಯಾಲಯದ ವಿಚಾರಣೆಯ ಬಳಿಕ ಸ್ಪಷ್ಟವಾಗಲಿವೆ.