ಬೆಂಗಳೂರು, ಅ.14 (DaijiworldNews/AA): ರಾಜಧಾನಿ ಬೆಂಗಳೂರು ಹೊರವಲಯದ ರಾಜಾನುಕುಂಟೆಯಲ್ಲಿ ನಿಲ್ಲಿಸಿದ್ದ ರೈಲಿನಲ್ಲಿ ಅ ಮೂರು ಬೋಗಿಗಳಿಗೆ ಬೆಂಕಿ ತಗುಲಿರುವ ಘಟನೆ ಬುಧವಾರ ಬೆಳಗ್ಗೆ ಸುಮಾರು 10:30ರ ವೇಳೆಗೆ ನಡೆದಿದೆ.

ಹಲವು ದಿನಗಳಿಂದ ರಾಜಾನುಕುಂಟೆಯಲ್ಲಿ ರೈಲ್ವೇ ಯಾರ್ಡ್ನಲ್ಲಿ ಮಾಕ್ ಡ್ರಿಲ್ಗಾಗಿ ಬಳಸಲಾಗುತ್ತಿದ್ದ ಈ ಮೂರು ಬೋಗಿಗಳನ್ನು ನಿಲ್ಲಿಸಲಾಗಿತ್ತು. ಬೋಗಿಗಳು ರೈಲ್ವೆ ಹಳಿಯ ಮೇಲೆ ಇರಲಿಲ್ಲ. ಅಲ್ಲದೆ, ಬೋಗಿಗಳಲ್ಲಿ ಯಾರೂ ಇರಲಿಲ್ಲ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ವೇಗವಾಗಿ ವ್ಯಾಪಿಸಿದೆ. ಬೆಂಕಿಯ ಪರಿಣಾಮ ಎರಡು ಕೋಚ್ಗಳಿಗೆ ತೀವ್ರ ಹಾನಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿವೆ.
ಬೋಗಿಗಳಲ್ಲಿ ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.