ನವದೆಹಲಿ, ಅ.14 (DaijiworldNews/AA): ಜಂತರ್ ಮಂತರ್ ಅನ್ನು ಮರಳಿ ಪಡೆಯುತ್ತೇವೆ. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ನಾಯಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ಬಂಧನದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಅವರು, "ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ. ಅದಕ್ಕಾಗಿ ಸಿಜೆಪಿ ಯುವಕರನ್ನು ಜೈಲಿಗೆ ಹಾಕುವುದು ಹೇಡಿತನದ ಕೃತ್ಯ" ಎಂದು ತಿಳಿಸಿದ್ದಾರೆ.
"ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು ಮತ್ತು ಇಂಡಿಯಾ ಬ್ಲಾಕ್-ಬೇರೆ ಬೇರೆ ಬ್ಯಾನರ್ಗಳಿದ್ದರೂ ಎಲ್ಲರೂ ಒಂದೇ ಕಾರಣಕ್ಕಾಗಿ ನಿಂತಿದ್ದಾರೆ. ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಜಂತರ್ ಮಂತರ್ ಭಾರತೀಯರಿಗೆಲ್ಲರಿಗೂ ಸೇರಿದ್ದು, ಅದನ್ನು ಮರಳಿ ಪಡೆಯುತ್ತೇವೆ" ಎಂದು ವಾಗ್ದಾಳಿ ನಡೆಸಿದ್ದಾರೆ.