ಹೊಸನಗರ, ಅ.14 (DaijiworldNews/AK): ನರೇಂದ್ರ ಮೋದಿಜೀ ಅವರು ಪ್ರಧಾನಮಂತ್ರಿಯಲ್ಲ; ಈ ದೇಶದ ಪ್ರಧಾನ ಸೇವಕ ಎಂಬ ಭಾವನೆಯಿಂದ ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಸೇವಾ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 2047ನೇ ಇಸವಿಗೆ ವಿಕಸಿತ ಭಾರತ ಸಂಕಲ್ಪಕ್ಕಾಗಿ ಮೋದಿಜೀ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಭಾರತವು ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಇದು ಕೇವಲ ಭಾಷಣದಿಂದ ಆದುದಲ್ಲ. ಕಳೆದ 12-13 ವರ್ಷಗಳಲ್ಲಿ ದೇಶದ ಮೂಲಭೂತ ಸೌಕರ್ಯ ಸೇರಿದಂತೆ ಯುವಜನತೆ, ಮಹಿಳೆಯರು, ಬಡಜನತೆ, ರೈತರಿಗೆ ಹತ್ತಾರು ಜನಪರ ಯೋಜನೆಗಳನ್ನು ನೀಡುತ್ತ ಬಂದಿದ್ದಾರೆ ಎಂದು ವಿವರಿಸಿದರು.
ಇದರ ಪರಿಣಾಮವಾಗಿ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ಸೇತರ ಪಕ್ಷಕ್ಕೆ ಸತತವಾಗಿ 3ನೇ ಬಾರಿಗೆ ಈ ದೇಶದ ಜನರು ಮೋದಿಜೀ ಅವರು ನಾಯಕತ್ವವನ್ನು ಮೆಚ್ಚಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಅವಕಾಶ ನೀಡಿದ್ದಾರೆ ಎಂದರು.
ಪ್ರಧಾನಮಂತ್ರಿ ಆಗುವುದು ಜನ್ಮಸಿದ್ಧ ಹಕ್ಕೆಂಬ ಭಾವನೆ
ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯವರಿಗೆ ಮೋದಿಜೀ ಅವರ ಜನಪ್ರಿಯತೆಯನ್ನು ಸಹಿಸಲು ಸಾಧ್ಯ ಆಗುತ್ತಿಲ್ಲ. ತಾನು ಹುಟ್ಟಿದ್ದೇ ಪ್ರಧಾನಿಯಾಗಲು ಎಂದು ರಾಹುಲ್ ಗಾಂಧಿಯವರು ಅಂದುಕೊಂಡಿದ್ದರು. ಪ್ರಧಾನಮಂತ್ರಿ ಆಗುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ರಾಹುಲ್ ಗಾಂಧಿಯವರು ಭಾವಿಸಿದ್ದರೆಂದು ಕಾಣುತ್ತದೆ. ಮೋದಿಜೀ ತೃತೀಯ ಬಾರಿ ಪ್ರಧಾನಿ ಆಗಿದ್ದಾರೆ. ಇವತ್ತಿಗೂ ಮೋದಿಜೀ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ ಎಂದು ನುಡಿದರು.
ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನರು ವಿಶ್ವಾಸ ಕಳಕೊಂಡಿದ್ದು ನುಂಗಲಾರದ ತುತ್ತಾಗಿದೆ. ಜನರಿಗೆ ರಾಹುಲ್ ಗಾಂಧಿಯವರ ಬಗ್ಗೆ ವಿಶ್ವಾಸ ಇಲ್ಲ. ಹತಾಶರಾದ ರಾಹುಲ್ ಗಾಂಧಿಯವರು ಚುನಾವಣಾ ಆಯೋಗವನ್ನು ಟೀಕಿಸುತ್ತಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರನ್ನು ಬಲಿಪಶು ಮಾಡುವ ಕೆಲಸ
ಹೈಕೋರ್ಟಿನಲ್ಲಿ ಸ್ಟೇ ಪಡೆಯುವ ಪರಿಸ್ಥಿತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದಾಗಿದೆ. ಯಾರಿಂದ ಅಧಿಕಾರ ಪಡೆಯಿತೋ ಅಂಥ ಸಿದ್ದರಾಮಯ್ಯನವರನ್ನು ಬಲಿಪಶು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿನಲ್ಲಿ ಸ್ಟಿಂಗ್ ಮಾಡುವ ಘಟಕ
ಬಿಜೆಪಿ ಐಟಿ ಸೆಲ್ ಹೊಂದಿದ್ದರೆ, ಕಾಂಗ್ರೆಸ್ಸಿನಲ್ಲಿ ಸ್ಟಿಂಗ್ ಮಾಡಲೆಂದು ಘಟಕ ಮಾಡಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಪಡೆಯಲೆಂದು ಅದನ್ನು ಬಳಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಕಾಂಗ್ರೆಸ್ ಶಾಸಕರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕೆಂಬ ಉದ್ದೇಶ ಇದರ ಹಿಂದಿದೆ ಎಂದು ಆರೋಪಿಸಿದರು.