ಹೈದರಾಬಾದ್, ಅ.16 (DaijiworldNews/AA): ನಮ್ಮ ದೇಶದ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ಭಾರತವೇ ನಿರ್ಧರಿಸುತ್ತದೆ. ಎಲ್ಲಿಯೋ ಕುಳಿತ ಈ ಬಿಳಿಯ ವ್ಯಕ್ತಿ ನಮಗೆ ಆದೇಶ ನೀಡಲು ಯಾರು ಎಂದು ಎಲಾನ್ ಮಸ್ಕ್ ವಿರುದ್ಧ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾರತದ ರಾಜಕೀಯ ಮತ್ತು ವಾಣಿಜ್ಯ ವ್ಯವಸ್ಥೆಯನ್ನು ಟೀಕಿಸಿರುವ ಎಲಾನ್ ಮಸ್ಕ್ ಅವರ ವಿರುದ್ಧ ಹೈದರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾವು ಯಾವಾಗಲೂ ನರೇಂದ್ರ ಮೋದಿ ಅವರ ರಾಜಕೀಯವನ್ನು ವಿರೋಧಿಸುತ್ತೇವೆ, ಮುಂದೆಯೂ ವಿರೋಧಿಸುತ್ತೇವೆ. ಆದರೆ ಒಬ್ಬ ವಿದೇಶಿ (ಬಿಳಿಯ ವ್ಯಕ್ತಿ) ನಮ್ಮ ಭಾರತದ ಪ್ರಧಾನಿ ಬಗ್ಗೆ ಈ ರೀತಿಯ ಮಾತುಗಳನ್ನಾಡುವುದನ್ನು ಹೇಗೆ ಒಪ್ಪಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
"ವಿದೇಶಿ ಶ್ರೀಮಂತನೊಬ್ಬನ ಹೊಟ್ಟೆ ತುಂಬಿಸಲು ನಮ್ಮ ದೇಶದ ನಾಗರಿಕರ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಲು ಸಾಧ್ಯವಿಲ್ಲ. ಭಾರತದ ನೀತಿ ನಿಯಮಗಳು ದೇಶದ ಹಿತಾಸಕ್ತಿಯ ಆಧಾರದ ಮೇಲೆ ನಿರ್ಧಾರವಾಗಬೇಕೇ ಹೊರತು ವಿದೇಶಿಗರ ಒತ್ತಡಕ್ಕಲ್ಲ" ಎಂದರು.
"ಪ್ರತಿನಿತ್ಯ ರಾಷ್ಟ್ರೀಯತೆಯ ಜಪ ಮಾಡುವ ಬಿಜೆಪಿ, ಪ್ರಭಾವಿ ವಿದೇಶಿ ಉದ್ಯಮಿಯೊಬ್ಬ ದೇಶದ ಅಧಿಕಾರವನ್ನೇ ಪ್ರಶ್ನಿಸಿದಾಗ ಯಾಕೆ ಮೌನವಾಗಿದೆ? ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ಬಿಳಿ ಚರ್ಮದವರನ್ನು ಕಂಡರೆ ಅಷ್ಟೊಂದು ಭಯವೇಕೆ? ದೇಶೀಯ ರಾಜಕೀಯ ವಿರೋಧಿಗಳ ವಿರುದ್ಧ ತೋರುವ ಬಲಪ್ರದರ್ಶನವನ್ನು ಮಸ್ಕ್ ವಿರುದ್ಧ ತೋರಿಸಲು ಪ್ರಧಾನಿ ಮೋದಿಗೆ ಸಾಧ್ಯವಿಲ್ಲವೇ? ಭಾರತದ ನಿರ್ಧಾರಗಳನ್ನು ಭಾರತವೇ ತೆಗೆದುಕೊಳ್ಳುತ್ತದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿ" ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.